ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾಕ್ಕೆ 64 ರನ್ ಗಳ ಜಯ
ಸಿಡ್ನಿ, ಮಾ.8: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೇಲೆ ಸಿಡ್ನಿಯಲ್ಲಿ ಆಸೀಸ್ ರನ್ ಹೊಳೆ ಹರಿಸಿತು. ಆಸ್ಟ್ರೇಲಿಯಾ ಒಡ್ಡಿದ 376 ರನ್ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಂಕನ್ ಸಿಂಹಗಳು 46.2 ಓವರ್ ಗಳಲ್ಲಿ 312ಸ್ಕೋರಿಗೆ ಆಲೌಟ್ ಆಗಿ ಶರಣಾಗಿದ್ದಾರೆ.
ಲಂಕಾ ಚೇಸಿಂಗ್: 24ನೇ ಶತಕ(ವಿಶ್ವಕಪ್ ನಲ್ಲಿ ಸತತ ಮೂರನೇ ಶತಕ) ಸಿಡಿಸಿದ ಕುಮಾರ್ ಸಂಗಕ್ಕಾರ 104(106ಎ, 11 ಬೌಂಡರಿ) ಅವರ ನೆರವಿನಿಂದ 33 ಓವರ್ ಗಳಲ್ಲಿ 200ರನ್ ಗಳಿಸಿದೆ. ತಿರಿಮನ್ನೆ 1 ರನ್ ಗಳಿಸಿ ವಿಫಲರಾದರೆ, ದಿಲ್ಶನ್ ಆಕರ್ಷಕ 62(60 ಎ, 8 ಬೌಂಡರಿ) ಗಳಿಸಿ ಔಟಾಗಿದ್ದಾರೆ. ಮಹೇಲ ಜಯವರ್ದನೆ 19ರನ್ ಗಳಿಸಿ ಕ್ಲಾರ್ಕ್ ಎಸೆತದಲ್ಲಿ ರನೌಟ್ ಆಗಿ ಪೆವಿಲಿಯನ್ ತೆರಳಿದರು.

ಆದರೆ, ನಾಯಕ ಮ್ಯಾಥ್ಯೂಸ್ 35, ಪೆರೇರಾ 35 ರನ್ ರನ್ ಗಳಿಸಿ ಚೇಸಿಂಗ್ ಜಾರಿಯಲ್ಲಿಟ್ಟಿದ್ದರು. ಈ ನಡುವೆ ಚಂಡಿಮಾಲ್ 24 ಎಸೆತಗಳಲ್ಲಿ 54ರನ್(8x4,1x6) ಸಿಡಿಸಿ ಆಸ್ಟ್ರೇಲಿಯಾಕ್ಕೆ ಭಯ ಹುಟ್ಟಿಸಿದರು. ಚಂಡಿಮಾಲ್ ಗಾಯಗೊಂಡು ಪೆವಿಲಿಯನ್ ಗೆ ಮರಳುತ್ತಿದ್ದಂತೆ ಬ್ಯಾಟಿಂಗ್ ಕುಸಿತ ಆರಂಭಗೊಂಡಿತು. ಶ್ರೀಲಂಕಾ 312ಕ್ಕೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. ಆಸ್ಟ್ರೇಲಿಯಾ ಪರ ಫಾಲ್ಕ್ನರ್ 9 ಓವರ್ ಗಳಲ್ಲಿ 48ಕ್ಕೆ3, ಸ್ಟಾರ್ಕ್, ಜಾನ್ಸನ್ ತಲಾ 2, ವಾಟ್ಸನ್ 1 ವಿಕೆಟ್ ಪಡೆದರು.
ಆಸೀಸ್ ಇನ್ನಿಂಗ್ಸ್: ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ 12 ಎಸೆತಗಳಲ್ಲಿ 9 ರನ್ ಗಳಿಸಿ ಲಸಿತ್ ಮಾಲಿಂಗಗೆ ಬಲಿಯಾದರು. ಅರೋನ್ ಫಿಂಚ್ ಕೂಡಾ 24 ಎಸೆತಗಳಲ್ಲಿ 3 ಬೌಂಡರಿ ಇದ್ದ 24ರನ್ ಗಳಿಸಿ ಪ್ರಸನ್ನ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು.

ನಂತರ ನಾಯಕ ಮೈಕಲ್ ಕ್ಲಾರ್ಕ್ ಹಾಗೂ ಸ್ಟೀವ್ ಸ್ಮಿತ್ ತಲಾ ಅರ್ಧ ಶತಕ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.ಅದರೆ, ಮಾಲಿಂಗ ಮತ್ತೊಮ್ಮೆ ಮಾರಕ ಬೌಲಿಂಗ್ ಮಾಡಿ ನಾಯಕ ಕ್ಲಾರ್ಕ್ ರನ್ನು ಕ್ಲೀನ್ ಬೋಲ್ಡ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು.
ಕ್ಲಾರ್ಕ್ 68 ಎಸೆತಗಳಲ್ಲಿ 68 ರನ್ (6 ಬೌಂಡರಿ) ಗಳಿಸಿದರು,. ಸ್ಮಿತ್ 72ರನ್ (87ಎ, 7 ಬೌಂಡರಿ, 1 ಸಿಕ್ಸರ್) ಗಳಿಸಿ ಭಾರಿ ಹೊಡೆತಕ್ಕೆ ಯತ್ನಿಸಿ ದಿಲ್ಶನ್ ಬೌಲಿಂಗ್ ನಲ್ಲಿ ಪೆರೆರಾಗೆ ಕ್ಯಾಚಿತ್ತು ಔಟಾದರು,
ಮ್ಯಾಕ್ಸ್ ವೆಲ್ -ವಾಟ್ಸನ್ ಮೋಡಿ: 52 ಎಸೆತಗಳಲ್ಲಿ 102 ರನ್ (1೦X4, 4X6) ಗಳಿಸಿ ಪೆರೆರಾ ಎಸೆತದಲ್ಲಿ ಮಾಲಿಂಗಕ್ಕೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ. 32 ಎಸೆತಗಳಲ್ಲಿ 57 ಬಾರಿಸಿರುವ ವಾಟ್ಸನ್ ಭರ್ಜರಿ ಆಟ ಪ್ರದರ್ಶಿಸಿ ಲಯಕ್ಕೆ ಮರಳಿದ್ದಾರೆ.

ಟೀಂ ನಲ್ಲಿ ಬದಲಾವಣೆ: ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್ ಮಾರ್ಷ್ ಹಾಗೂ ಜೋಶ್ ಹಜೇಲ್ ವುಡ್ ಬದಲಿಗೆ ಶೇನ್ ವಾಟ್ಸನ್ ಹಾಗೂ ಕ್ಸೇವಿಯರ್ ದೊಹಾರ್ಟಿ ಅಂತಿಮ XI ನಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ದಿಮುತ್ ಕರುಣಾರತ್ನೆ, ರಂಗಣ ಹೇರತ್ ಹಾಗೂ ಸುರಂಗ ಲಕ್ಮಲ್ ಬದಲಿಗೆ ಸೀಕುಗೆ ಪ್ರಸನ್ನ, ಉಪುಲ್ ತರಂಗ, ಸಚಿತ್ರಾ ಸೇನಾನಾಯಕೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications