Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಇವರ ಆರ್ಭಟಕ್ಕೆ ತಲೆಕೆಡಿಸಿಕೊಂಡಿದೆ ಕ್ರಿಕೆಟ್ ಜಗತ್ತು..? | Oneindia Kannada
ICC World Cup 2019: 5 pacers who can push batsmen on the backfoot

ಬೆಂಗಳೂರು, ಮೇ 16: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿಯಾಗಿದೆ. ಅದರಲ್ಲೂ ಈ ಬಾರಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ವಿಶ್ವಕಪ್‌ ನಡೆಯಲಿದ್ದು, ಅಲ್ಲಿನ ಪಿಚ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುತ್ತವೇ ಅಥವಾ ಬೌಲರ್‌ಗಳಿಗೆ ನೆರವಾಗಲಿದೆಯೇ ಎಂಬುದು ಕಗ್ಗಂಟಾಗಿ ಬಿಟ್ಟಿದೆ

ಇನ್ನು ಮಾಜಿ ಕ್ರಿಕೆಟಿಗರ ಮತ್ತು ಪಂಡಿತರ ಲೆಕ್ಕಾಚಾರದ ಪ್ರಕಾರ ಬೇಸಿಗೆ ದಿನಗಳಲ್ಲಿ ವಿಶ್ವಕಪ್‌ ಆಯೋಜಿಸಲಾಗುತ್ತಿರುವದರಿಂದ ಈ ಬಾರಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಜೋರಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಟೂರ್ನಿಯಲ್ಲಿ 300ಕ್ಕಿಂತಲೂ ಕಡಿಮೆ ಸ್ಕೋರ್‌ ಕಾಣುವುದು ಅಪರೂಪ ಎಂದೇ ಹೇಳಲಾಗುತ್ತಿದೆ.

ಪಿಚ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವಂತಿದ್ದರೂ, ಬ್ಯಾಟ್ಸ್‌ಮನ್‌ಗಳ ನಿದ್ರ ಕೆಡಿಸಬಲ್ಲ ಬೌಲರ್‌ಗಳು ಈ ಬಾರಿ ವಿಶ್ವಕಪ್‌ ಕಣದಲ್ಲಿದ್ದಾರೆ. ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗದಂತಿರುವ ಪಿಚ್‌ಗಳಲ್ಲಿಯೂ ಮಿಂಚಬಲ್ಲ ಟಾಪ್‌ 5 ಬೌಲರ್‌ಗಳ ವಿವರ ಇಲ್ಲಿದೆ.

ಬೂಮ್‌ ಬೂಮ್‌ ಬುಮ್ರಾ

ಸದ್ಯ ವಿಶ್ವದ ಶ್ರೇಷ್ಠ ವೇಗದ ಬೌಲರ್‌ ಎಂದೇ ಕರೆಯಲಾಗುತ್ತಿರುವ ಟೀಮ್‌ ಇಂಡಿಯಾದ ವೇಗಿ ಜ್‌ಪ್ರೀತ್‌ ಬುಮ್ರಾ ಮೇಲೆ ಎಲ್ಲರ ಕಣ್ಣಿದೆ. ಈ ಬಾರಿ ಭಾರತ ತಂಡ ವಿಶ್ವಕಪ್‌ ಗೆಲ್ಲುವುದಾದರೆ ಬುಮ್ರಾ ಅವರ ಪ್ರದರ್ಶನ ಅತ್ಯಂತ ಮಹತ್ವದ್ದಾಗಿರಲಿದೆ. ಏಕದಿನ ಕ್ರಿಕೆಟ್‌ ಶ್ರೇಯಾಂಕದಲ್ಲಿ ನಂ.1 ಬೌಲರ್‌ ಆಗಿರುವ 'ಬೂಮ್‌ ಬೂಮ್‌' ಖ್ಯಾತಿಯ ಬುಮ್ರಾ, ಡೆತ್‌ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ವಿಭಿನ್ನ ಬೌಲಿಂಗ್‌ ಶೈಲಿ ಮತ್ತು ವೇಗ ಹಾಗೂ ನಿಖರತೆ ಕಾಯ್ದುಕೊಳ್ಳುವಲ್ಲಿ ನಿಸ್ಸೀಮರಾಗಿರುವ ಬುಮ್ರಾ ಎದುರು ಯಾವುದೇ ಪಿಚ್‌ ಆಗಲಿ ರನ್‌ ಗಳಿಸುವುದು ಅಷ್ಟು ಸುಲಭವಲ್ಲ. ಇತ್ತೀಚೆಗಷ್ಟೇ ಅಂತ್ಯಗೊಂಡ 12ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 16 ಪಂದ್ಯಗಳಿಂದ 19 ವಿಕೆಟ್‌ಗಳನ್ನು ಉರುಳಿಸಿದ್ದ ಬುಮ್ರಾ, ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಕಗಿಸೊ ರಬಾಡ

ದಕ್ಷಿಣ ಆಫ್ರಿಕಾದ 23 ವರ್ಷದ ಯುವ ವೇಗದ ಬೌಲರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೂ ಜಾಗತಿಕ ಕ್ರಿಕೆಟ್‌ನಲ್ಲಿ ಕೇಂದ್ರ ಬಿಂದುವಾಗಿದ್ದಾರೆ. ತಮ್ಮ ಎತ್ತರದ ಲಾಭ ಪಡೆದು ಹೆಚ್ಚು ವೇಗದಿಂದ ಚೆಂಡನ್ನು ಎಸೆಯುವ ಸಾಮಥ್ರ್ಯದ ಮೂಲಕ ಹೆಚ್ಚು ಬೌನ್ಸ್‌ ಕೂಡ ತರಬಲ್ಲ ರಬಾಡ, ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ತಂಡದ ವಿಕೆಟ್‌ ಟೇಕಿಂಗ್‌ ಬೌಲರ್‌ ಕೂಡ. ಇತ್ತೀಚೆಗೆ ಅಂತ್ಯಗೊಂಡ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದ ರಬಾಡ, 12 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಉರುಳಿಸಿ ತಂಡಕ್ಕೆ 2012ರ ಬಳಿಕ ಮೊದಲ ಬಾರಿ ಪ್ಲೇ ಆಫ್ಸ್‌ ಅರ್ಹತೆ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆದರೆ, ಬೆನ್ನು ನೋವಿನ ಸಮಸ್ಯೆ ಕಾರಣ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳದೆ ತಾಯ್ನಾಡಿಗೆ ಹಿಂದಿರುಗಿದ್ದರು. ಇದೀಗ ಚೇತರಿಕೆಯ ಹಾದಿಯಲ್ಲಿರುವ ರಬಾಡ, ಮೇ 30ರಂದು ಆತಿಥೇಯ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ವಿಶ್ವಕಪ್‌ ಉದ್ಘಾಟನಾ ಪಂದ್ಯಕ್ಕೆ ತಂಡ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಮಿಚೆಲ್‌ ಸ್ಟಾರ್ಕ್‌

ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಹೆಸರು ಕೇಳಿದರೆನೇ ಅವರ ಬೌಲಿಂಗ್‌ನ ಮಿಂಚಿನ ವೇಗ ಕಣ್ಣೆದುರು ಬಂದುಬಿಡುತ್ತದೆ. ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯ ಹೊಂದಿರುವ ಸ್ಟಾರ್ಕ್‌, ಕಳೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಉರುಳಿಸಿ ಟೂರ್ನಿ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆಗೂ ಸ್ಟಾರ್ಕ್‌ ಪಾತ್ರರಾಗಿದ್ದರು. ಆದರೆ, ವಿಶ್ವಕಪ್‌ ಬಳಿಕ ಅದೇ ಲಯ ಕಾಯ್ದುಕೊಳ್ಳಲು ಸ್ಟಾರ್ಕ್‌ ಅವರಿಂದ ಸಾಧ್ಯವಾಗಿಲ್ಲ. ಸತತ ಗಾಯದ ಸಮಸ್ಯೆಗಳೇ ಇದಕ್ಕೆ ಕಾರಣ. ಆದರೂ, ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್‌ 'ಎ' ವಿರುದ್ಧದ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಿದ ಸ್ಟಾರ್ಕ್‌ ತಮ್ಮ ಮಿಂಚಿನ ವೇಗದ ಝಲಕ್‌ ಪ್ರದರ್ಶಿಸಿ, ವಿಶ್ವಕಪ್‌ಗೂ ಮೊದಲು ತಮ್ಮ ಶ್ರೇಷ್ಠ ಲಯ ಕಂಡುಕೊಂಡಿರುವ ಸಂದೇಶ ರವಾನಿಸಿದ್ದಾರೆ.

ಟ್ರೆಂಟ್‌ ಬೌಲ್ಟ್‌

ಹಲವು ವರ್ಷಗಳಿಂದ ನ್ಯೂಜಿಲೆಂಡ್‌ ತಂಡದ ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸುತ್ತಿರುವ ಟ್ರೆಂಟ್‌ ಬೌಲ್ಟ್‌, ತಮ್ಮ ಎಡಗೈ ಬೌಲಿಂಗ್‌ನಲ್ಲಿ ಸ್ವಿಂಗ್‌ ತರಬಲ್ಲ ಸಾಮರ್ಥ್ಯದೊಂದಿಗೆ ಯಶಸ್ಸು ಗಳಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಸ್ಟಾರ್ಕ್‌ ಜೊತೆಗೆ ಅತಿ ಹೆಚ್ಚು ವಿಕೆಟ್‌ ಪಡೆದವರಲ್ಲಿ ಬೌಲ್ಟ್‌ ಕೂಡ ಒಬ್ಬರು. ವಿಶ್ವದ ಯಾವುದೇ ಪಿಚ್‌ನಲ್ಲಿ ಯಾವುದೇ ಸಮಯದಲ್ಲಿ ಉತ್ತಮ ವೇಗದೊಂದಿಗೆ ಸ್ವಿಂಗ್‌ ತರಬಲ್ಲ ವಿಶೇಷ ಬೌಲರ್‌ ಬೌಲ್ಟ್‌. ಕಿವೀಸ್‌ ಪರ 69 ಟೆಸ್ಟ್‌, 79 ಏಕದಿನ ಪಂದ್ಯಗಳನ್ನು ಆಡಿರುವ 29 ವರ್ಷದ ಅನುಭವಿ ವೇಗಿ, ಇತ್ತೀಚೆಗಷ್ಟೇ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದರು. ಆದರೆ, ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಅವರಿಗೆ ಲಭ್ಯವಾಗಲಿಲ್ಲ. ಆಡಿದ 5 ಪಂದ್ಯಗಳಲ್ಲಿ 5 ವಿಕೆಟ್‌ ಪಡೆದು ಗಮನ ಸೆಳೆದಿದ್ದರು.

ಹಸನ್‌ ಅಲಿ

ವೇಗದ ಬೌಲಿಂಗ್‌ಗೆ ಹೆಸರುವಾಸಿಯಾದ ಪಾಕಿಸ್ತಾನ ತಂಡಕ್ಕೆ ಈ ಬಾರಿಯ ವಿಶ್ವಕಪ್‌ನಲ್ಲಿ ಯುವ ವೇಗಿ ಹಸನ್‌ ಅಲಿ ಟ್ರಂಪ್‌ ಕಾರ್ಡ್‌ ಸಾಬೀತಾಗಬಲ್ಲರು. 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹಸನ್‌ ಅಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದರು. ಒಟ್ಟಾರೆ 13 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿ ಶ್ರೇಷ್ಠ ಆಟಗಾರನಾಗಿಯೂ ಹೊರಹೊಮ್ಮಿದ್ದರು. ಗಂಟೆಗೆ 140 ಕಿ.ಮೀಗಳ ಸರಾಸರಿ ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಹಸನ್‌ ಅಲಿ, ತಮ್ಮ ನೇರ ಮತ್ತು ನಿಖರತೆಯ ಜತೆಗೆ ಎಸೆತಗಳಿಯೂ ಬದಲಾವಣೆ ತಂದು ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಏಕದಿನ ಕ್ರಿಕೆಟ್‌ನಲ್ಲಿ ಪಾಕ್‌ ಪರ ಆಡಿದ 44 ಪಂದ್ಯಗಳಲ್ಲಿ 77 ವಿಕೆಟ್‌ಗಳನ್ನು ಪಡೆದಿರುವ ಅವರು, ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.

Story first published: Thursday, May 16, 2019, 14:39 [IST]
Other articles published on May 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+