ವಿಶ್ವಕಪ್ : ಸತತ ಸೋಲು, ದಕ್ಷಿಣ ಆಫ್ರಿಕಾ ದುಃಸ್ಥಿತಿಗೆ 5 ಕಾರಣಗಳು

ಬೆಂಗಳೂರು, ಜೂನ್ 24: ದಕ್ಷಿಣ ಆಫ್ರಿಕಾ ಎಂದರೆ ಶಿಸ್ತು, ವೃತ್ತಿಪರತೆಗೆ ಹೆಸರಾಗಿದ್ದ ತಂಡ, ಆದರೆ, ಈ ಬಾರಿ ವಿಶ್ವಕಪ್ ನಲ್ಲಿ ಸತತವಾಗಿ ಪಂದ್ಯಗಳನ್ನು ಕೈ ಚೆಲ್ಲುವ ಮೂಲಕ ಟೂರ್ನಮೆಂಟ್ ನಿಂದ ಲೀಗ್ ಹಂತದಲ್ಲೆ ಹೊರಬೀಳಲು ಸಿದ್ಧವಾಗಿದೆ.
ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾನುವಾರ(ಜೂನ್ 23)ದಂದು ಪಾಕಿಸ್ತಾನದ ವಿರುದ್ಧ 49ರನ್ ಗಳಿಂದ ಸೋಲು ಕಂಡ ದಕ್ಷಿಣ ಆಫ್ರಿಕಾದ ಸಮಸ್ಯೆಗಳು ಒಂದೆರಡಲ್ಲ. ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗವು ಮೊನಚು ಕಳೆದುಕೊಂಡಿದೆ. ಡೇಲ್ ಸ್ಟೇಯ್ನ್, ಮಾರ್ಕೆಲ್ ರಂಥ ಬೌಲರ್ ಗಳಿಲ್ಲ ನಿಜ, ಆದರೆ, ಹರಿಣಗಳ ತಂಡ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದೆ.
ವಿಶ್ವಕಪ್ 2019ರಲ್ಲಿ ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧ ಸೋಲು ಕಂಡಿರುವ ಫಾಫ್ ಡು ಪ್ಲೆಸಿಸ್ ಪಡೆಗೆ 7 ಪಂದ್ಯಗಳಲ್ಲಿ ಗೆಲುವು ಸಿಕ್ಕಿದ್ದು ಅಫ್ಘಾನಿಸ್ತಾನದ ವಿರುದ್ಧ ಮಾತ್ರ, ಇನ್ನೊಂದು ಪಂದ್ಯ ಮಳೆಗೆ ಆಹುತಿಯಾಯಿತು. ವಿಶ್ವಕಪ್ ಗೆ ಬರುವ ಮುನ್ನ ಸರಿಯಾದ ಸಿದ್ಧತೆ ಮಾಡಿಕೊಳ್ಳದ ದಕ್ಷಿಣ ಆಫ್ರಿಕಾ ತಂಡ ಈಗ ಸೋಲಿನ ಕಾರಣಗಳನ್ನು ಹುಡುಕುತ್ತಿದೆ. ಐಪಿಎಲ್ ನಲ್ಲಿ ಆಡಿದ್ದು ಕೂಡಾ ಕಾರಣ ಎಂದು ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ದೊಡ್ಡದಾದ ಗಾಯಾಳುಗಳ ಪಟ್ಟಿ
ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಡೇಲ್ ಸ್ಟೇಯ್ನ್ ಸತತ ಗಾಯಾಳುವಾದರೂ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಐಪಿಎಲ್ ನಲ್ಲಿ ಆಡಲು ಬಂದರೂ ಮತ್ತೊಮ್ಮೆ ಚಿಕಿತ್ಸೆ, ವಿಶ್ವಕಪ್ ಗೆ ಸಿದ್ಧತೆ ನೆಪದಲ್ಲಿ ಮರಳಿದ್ದರು. ಆದರೆ, ವಿಶ್ವಕಪ್ ನಲ್ಲಿ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ. ಸ್ಟೇಯ್ನ್-ರಬಾಡಾ-ನಿಗಿಡಿ ಮೂವರನ್ನು ಮುಂದಿಟ್ಟುಕೊಂಡು ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಹಣಿಯಲು ಯೋಜನೆ ಹಾಕಿಕೊಂಡಿದ್ದ ಡುಪ್ಲೆಸಿಸ್ ಗೆ ಯುದ್ಧಕ್ಕೆ ಮುನ್ನವೆ ಆಘಾತವಾಗಿತ್ತು. ರಬಾಡಾ-ನಿಗಿಡಿ ಜೋಡಿ ಪಂದ್ಯ ಗೆಲ್ಲಿಸಿಕೊಡಬಲ್ಲ ಪ್ರದರ್ಶನ ನೀಡುವ ಭರವಸೆಯನ್ನು ನೀಡಿಲ್ಲ.

ಲಯ ಕಳೆದುಕೊಂಡಿರುವ ಆಟಗಾರರು
ಕಳಪೆ ಫಾರ್ಮ್ ನಲ್ಲಿದ್ದರೂ ಅನುಭವದ ಆಧಾರದ ಮೇಲೆ ಹಶೀಂ ಅಮ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಒಡಿಐನಲ್ಲಿ ಕೊಹ್ಲಿ ನಂತರ ತ್ವರಿತಗತಿಯಲ್ಲಿ 8 ಸಾವಿರ ರನ್ ಗಳಿಸಿದ ಸಾಧನೆ ಬಿಟ್ಟರೆ, ಆಮ್ಲಾ ಉತ್ತಮ ಪ್ರದರ್ಶನ ನೀಡಿಲ್ಲ. ಕ್ವಿಂಟಾನ್ ಡಿಕಾಕ್, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್ ಪಂದ್ಯ ಗೆಲ್ಲಿಸಬಲ್ಲ ಪ್ರದರ್ಶನ ನೀಡಿಲ್ಲ. ಬೌಲಿಂಗ್ ವಿಭಾಗದಲ್ಲಿ ರಬಾಡಾ ವೈಫಲ್ಯ ತಂಡವನ್ನು ಕಾಡುತ್ತಿದೆ. ಐಪಿಎಲ್ ನಲ್ಲಿ ಮಿಂಚಿದ್ದ ರಬಾಡಾ ವಿಶ್ವಕಪ್ ನಲ್ಲಿ 6 ವಿಕೆಟ್ ಮಾತ್ರ ಗಳಿಸಿದ್ದಾರೆ. ಎದುರಾಳಿಯನ್ನು ಕಾಡಿ, ಪಂದ್ಯದ ದಿಕ್ಕು ಬದಲಾಯಿಸಬಲ್ಲ ಪ್ರದರ್ಶನ ನೀಡುವ ಪ್ರತಿಭೆ ಇದ್ದರೂ, ವಿಫಲರಾಗಿರುವುದು ತಂಡವನ್ನು ಚಿಂತೆಗೀಡು ಮಾಡಿದೆ. ಇಮ್ರಾನ್ ತಾಹೀರ್ ಸ್ಪಿನ್ ಮೋಡಿ ಮೂಡುತ್ತಿಲ್ಲ.
ವಿಶ್ವಕಪ್: ಪಾಕಿಸ್ತಾನಕ್ಕೆ ಶರಣಾದ ದಕ್ಷಿಣ ಆಫ್ರಿಕಾ

ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ವೈಫಲ್ಯ
ಇಲ್ಲಿ ತನಕ ದಕ್ಷಿಣ ಆಫ್ರಿಕಾ ತಂಡದ ಯಾವೊಬ್ಬ ಆಟಗಾರ ಕೂಡಾ ಶತಕ ಬಾರಿಸಿಲ್ಲ. ಅರ್ಧಶತಕ ಗಳಿಂದ ಪಂದ್ಯ ಗೆಲ್ಲಿಸಲು ಆಗುತ್ತಿಲ್ಲ. ಎದುರಾಳಿ ತಂಡಗಳು ಸತತವಾಗಿ 300 ಪ್ಲಸ್ ಸ್ಕೋರ್ ಮಾಡಲು ಬಿಡುತ್ತಿರುವುದು ಕಳಪೆ ಆಟಕ್ಕೆ ಉದಾಹರಣೆಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್ ಅನುಪಸ್ಥಿತಿ ಕಾಡುತ್ತಿದೆ. ಡುಪ್ಲೆಸಿಸ್, ರಾಸಿ ವಾನ್ ಡರ್ ಡುಸೆನ್ ಆಟದಿಂದ ಗೆಲುವು ಸಿಗುತ್ತಿಲ್ಲ. ಫೀಲ್ಡಿಂಗ್ ಮೂಲಕ ಹೆಸರುವಾಸಿಯಾಗಿದ್ದ ತಂಡ ಅನೇಕ ಕ್ಯಾಚ್ಚ್ ಕೈ ಚೆಲ್ಲಿ, ಬೌಂಡರಿಗಳನ್ನು ಬಿಡುತ್ತಿರುವುದು ಅಭಿಮಾನಿಗಳು ನೋಡಲು ಆಗುತ್ತಿಲ್ಲ.

ಎಬಿ ಡಿ ವಿಲಿಯರ್ಸ್ ಎಂಬ ಸ್ಪೂರ್ತಿ
ಎಬಿ ಡಿ ವಿಲಿಯರ್ಸ್ ಇದ್ದಿದ್ರೆ ಎಲ್ಲಾ ಪಂದ್ಯ ಗೆಲ್ಲಬಹುದಾಗಿತ್ತು ಎನ್ನಲು ಆಗುವುದಿಲ್ಲ. ಆದರೆ, 35 ವರ್ಷ ವಯಸ್ಸಿನ ಆಟಗಾರ ಎಬಿಡಿ ತಂಡದಲ್ಲಿದ್ದರೆ ಒಂದು ಸ್ಫೂರ್ತಿ ಇರುತ್ತಿತ್ತು. ಪಂದ್ಯದ ದಿಕ್ಕು ಬದಲಾಯಿಸಬಲ್ಲ ಆಟಗಾರರ ಪೈಕಿ ಎಬಿಡಿ ಅಗ್ರಗಣ್ಯರಾಗಿದ್ದಾರೆ. ವಿಶ್ವಕಪ್ ತಂಡಕ್ಕೆ ಮರಳಲು ಎಬಿಡಿ ಯತ್ನಿಸಿದ್ದರು ಎಂಬ ಸುದ್ದಿ ವಿಶ್ವಕಪ್ ಸಂದರ್ಭದಲ್ಲೇ ಚರ್ಚೆಗೀಡಾಗಿ ಹಾಲಿ ತಂಡದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿವೆ.

ಕೊಲ್ಪಾಕ್ ಒಪ್ಪಂದದ ನೆರಳು
ವರ್ಣಬೇಧ ನೀತಿಯನ್ನು ಅಳಿಸಿ ಹಾಕಲು ತಂಡದಲ್ಲಿ ಎಲ್ಲಾ ಬಗೆಯ ಆಟಗಾರರಿಗೆ ಸ್ಥಾನ ಕಲ್ಪಿಸಲು ಸಾಧ್ಯವಾಗದೆ ಹೋಗಬಹುದು. ಆರ್ಥಿಕ ಭದ್ರತೆಗಾಗಿ ಕೈಲಿ ಅಬಾಟ್, ರಿಲೇ ರೊಸೊ, ಡೇವಿಡ್ ವೀಸೆ ತಂಡ ತೊರೆದರೆ, ಕೋಟಾ ವ್ಯವಸ್ಥೆಯಡಿಯಲ್ಲಿ ಬಿಳಿ ವರ್ಣದ ಆಟಗಾರರು ತಂಡದಲ್ಲಿ ಅಭದ್ರತೆಯನ್ನು ಎದುರಿಸಿದ್ದು ಸುಳ್ಳಲ್ಲ. ಪ್ರತಿಭಾ ಪಲಾಯನದ ನೆರಳಿನಲ್ಲಿ ತಂಡ ವಿಶ್ವಕಪ್ ಗೆ ಅಣಿಯಾಗಲು ಯತ್ನಿಸಿ ಸೋಲು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications