ಇಂಗ್ಲೆಂಡ್ ಎದುರು ಕಿವೀಸ್‌ಗೆ ಸೋಲು: ಸೆಮಿಫೈನಲ್ ಲೆಕ್ಕಾಚಾರವೇನು!?

ಲಂಡನ್, ಜುಲೈ 4: ಐಸಿಸಿ ವಿಶ್ವಕಪ್ 2019ರಲ್ಲಿ ಪ್ರಬಲ ಎದುರಾಳಿಗಳೆನಿಸಿದ್ದ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕದನದಲ್ಲಿ ಇಯಾನ್ ಮಾರ್ಗನ್ ಬಳಗ ಬರೋಬ್ಬರಿ 119 ರನ್‌ಗಳಿಂದ ಗೆದ್ದಿದೆ. ಇಂಗ್ಲೆಂಡ್ ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ 3ನೇ ತಂಡವಾಗಿ ಗುರುತಿಸಿಕೊಂಡಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಟೂರ್ನಿಯ ಆರಂಭದಿಂದಲೂ ಅಂಕಪಟ್ಟಿಯ ಅಗ್ರ ಸ್ಥಾನದಲ್ಲೇ ಕುಳಿತ್ತಿದ್ದ ನ್ಯೂಜಿಲೆಂಡ್, ಸೆಮಿಫೈನಲ್ ಪ್ರವೇಶವನ್ನು ಅಧಿಕೃತವಾಗಿ ಖಾತರಿಗೊಳಿಸಿಕೊಂಡಿಲ್ಲ. ಹಾಗಾದರೆ ಇನ್ನುಳಿದ ಪಂದ್ಯಗಳಿಂದ ಅಂಕಪಟ್ಟಿಯಲ್ಲಿ ಬದಲಾವಣೆಗಳಾಗೋದಿಲ್ವಾ? ನ್ಯೂಜಿಲೆಂಡ್ ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳುತ್ತಾ?
ಸೆಮಿಫೈನಲ್ ನಿಟ್ಟಿನಲ್ಲಿ ಇನ್ನುಳಿದ ಫಂದ್ಯಗಳ ಲೆಕ್ಕಾಚಾರ, ಬಾಂಗ್ಲಾ-ಪಾಕ್ ಪಂದ್ಯ ಫಲಿತಾಂಶ ಅಂಕಪಟ್ಟಿಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

ಕಿವೀಸ್ ಸೆಮಿಫೈನಲ್ ಪ್ರವೇಶಿಸಲ್ವಾ?
ಮುಂದಿನ ಪಂದ್ಯಗಳಿಂದ ಅಂಕಪಟ್ಟಿಯಲ್ಲಿ ಬದಲಾವಣೆಗಳಾಗೋದಿಲ್ವಾ? ನ್ಯೂಜಿಲೆಂಡ್ ಸೆಮಿಫೈನಲ್ ಅವಕಾಶವನ್ನು ಕಳೆದುಕೊಳ್ಳುತ್ತಾ? ಎಂಬ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಬಹುದು. ಇಲ್ಲ ಅನ್ನುವುದಕ್ಕಿಂತಲೂ ಈಗಿರುವ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಕೂತಿರುವ ತಂಡಗಳಲ್ಲಿ ಏರುಪೇರಾಗಬಹುದೇ ಹೊರತು, ಸೆಮಿಫೈನಲ್ ಪ್ರವೇಶಿಸುವ ನಾಲ್ಕನೇ ತಂಡ ನ್ಯೂಜಿಲೆಂಡ್ ಆಗಲಿದೆ ಅನ್ನೋದು ಶೇ.99ರಷ್ಟು ಖರೆ.

ಪಾಕ್‌ಗೆ ಸೆಮಿಫೈನಲ್ ಆಸೆ ಮರೀಚಿಕೆ
ಸದ್ಯ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿಯಾಗಿದೆ. ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ಕಿವೀಸ್ ಟೂರ್ನಿಯ ಎಲ್ಲಾ 9 ಪಂದ್ಯಗಳನ್ನೂ ಆಡಿ ಮುಗಿಸಿದೆ. 5ನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸಲು ಶೇ 1. ಅವಕಾಶವಿದೆಯಾದರೂ ಅದೂ ಕಷ್ಟ ಸಾಧ್ಯ. ಹೀಗಾಗಿ ಕಿವೀಸ್ ಸೆಮಿಫೈನಲ್ ಅವಕಾಶವನ್ನು ಕಸಿದುಕೊಳ್ಳುವ ಪಾಕ್‌ಗೆ ಆಸೆ ಮರೀಚಿಕೆಯೆ.

ಪಾಕ್‌ಗೆ ಶೇ.1ರಷ್ಟು ಅವಕಾಶ
ಇಲ್ಲೀವರೆಗಿನ ಪಂದ್ಯಗಳ ಫಲಿಯಾಂಶಗಳ ಆಧಾರದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಲು ಅವಕಾಶ ಶೇ.99ರಷ್ಟು ನ್ಯೂಜಿಲೆಂಡ್‌ಗಿದೆ. ಶೇ.1ರಷ್ಟು ಪಾಕಿಸ್ತಾನಕ್ಕಿದೆ. ಇವೆರಡಲ್ಲದೆ ಇನ್ನೆಲ್ಲಾ ತಂಡಗಳು ಸೆಮಿಫೈನಲ್ ಆಸೆಯನ್ನು ಕೈ ಚೆಲ್ಲಿಯಾಗಿದೆ. ಪಾಕಿಸ್ತಾನಕ್ಕೆ ಜುಲೈ 5ರಂದು ಬಾಂಗ್ಲಾ ವಿರುದ್ಧ ಪಂದ್ಯವಿದ್ದು, ಆ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲೇಬೇಕು, ಮತ್ತು ಬಾಂಗ್ಲಾ ವಿರುದ್ಧ ಸುಮಾರು 300+ ರನ್ ಅಂತರದ ಗೆಲುವು ದಾಖಲಿಸಬೇಕು. ಇದು ಸಾಧ್ಯನಾ? ಪವಾಡ ಸಂಭವಿಸಿದರೆ ಸಾಧ್ಯವೇನೋ!

ರನ್ ರೇಟ್ ಪ್ಲಸ್ ಪಾಯಿಂಟ್
ಅಂಕಪಟ್ಟಿಯಲ್ಲಿ ಕಿವೀಸ್ ಈಗ 11 ಅಂಕ ಕಲೆ ಹಾಕಿದೆ. ಪಾಕಿಸ್ತಾನದ ಖಾತೆಯಲ್ಲಿ 9 ಅಂಕಗಳಿವೆ. ಪಾಕ್ ತಂಡ ಬಾಂಗ್ಲಾ ವಿರುದ್ಧ ಗೆದ್ದರೆ 11 ಅಂಕಗಳೇನೋ ಲಭಿಸಲಿದೆ. ಆದರೆ ನೆಟ್ ರನ್ ರೇಟ್? ಆರಂಭಿಕ ಪಂದ್ಯಗಳಲ್ಲಿ ಹೆಚ್ಚಿನ ರನ್ ಅಂತರದಿಂದ ಗೆದ್ದುಕೊಂಡ ಕೇನ್ ವಿಲಿಯಮ್ಸ್ ಬಳಗ ನೆಟ್ ರನ್ ರೇಟ್ ಹೆಚ್ಚಿಸಿಕೊಂಡಿತ್ತು. ಕಿವೀಸ್ ಕೈಯಲ್ಲಿ ಈಗ +0.175 ನೆಟ್ ರನ್ ರೇಟ್ ಇದೆ. -0.792 ನೆಟ್ ರನ್ ರೇಟ್ ಹೊಂದಿರುವ ಪಾಕ್, ಕಿವೀಸ್ ಮೀರಿಸಬೇಕಾದರೆ ಬಾಂಗ್ಲಾ ವಿರುದ್ಧ ಪವಾಡ ರೀತಿಯಲ್ಲಿ ಗೆಲುವು ದಾಖಲಿಸಲೇಬೇಕು. ಗಮ್ಮತ್ತಿನ ಸಂಗತಿಯೆಂದರೆ ಈ ಫಂದ್ಯದಲ್ಲಿ ಬಾಂಗ್ಲಾ ಏನಾದರೂ ಬ್ಯಾಟಿಂಗ್ ಆಯ್ದುಕೊಂಡರೆ ಪಾಕ್ ಸೆಮಿಫೈನಲ್ ಕನಸು ಆಗಲೇ ಗೋರಿ ಸೇರಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications