ENG vs AFG: ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಚಳ್ಳೆಹಣ್ಣು ತಿನ್ನಿಸಿದ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು
ಭಾನುವಾರ, ಅಕ್ಟೋಬರ್ 15ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಕ್ರಿಕೆಟ್ ಜನಕ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ.
ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ದುರ್ಬಲ ಎನಿಸಿದ್ದ ಅಫ್ಘಾನಿಸ್ತಾನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ. ಇದೇ ವೇಳೆ ಅಫ್ಘಾನಿಸ್ತಾನ ತಂಡಕ್ಕೆ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಗೆಲುವು ಇದಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 284 ರನ್‌ಗಳಿಗೆ ಸರ್ವಪತನ ಕಂಡಿತು.
285 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 40.3 ಓವರ್‌ಗಳಲ್ಲಿ ಕೇವಲ 215 ರನ್‌ಗಳಿಗೆ ಆಲೌಟ್ ಆಗಿ ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯ 2011ರ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಸೋತಿದ್ದ ಘಟನೆಯನ್ನು ನೆನಪಿಸಿತು.
285 ರನ್‌ಗಳ ಚೇಸಿಂಗ್‌ನಲ್ಲಿ ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಜಾನಿ ಬೈರ್‌ಸ್ಟೋವ್ ಮತ್ತು ಡಾವಿಡ್ ಮಲಾನ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ತಂಡದ ಮೊತ್ತ 3 ರನ್‌ಗಳಾಗಿದ್ದಾಗ ಜಾನಿ ಬೈರ್‌ಸ್ಟೋವ್ ವಿಕೆಟ್ ಒಪ್ಪಿಸಿದರು.

ನಂತರ ಬಂದ ಜೋ ರೂಟ್ 11 ರನ್ ಗಳಿಸಿ ಔಟಾದರೆ, ದೊಡ್ಡ ಮೊತ್ತ ಗಳಿಸುವ ನಿರೀಕ್ಷೆ ಮೂಡಿಸಿದ್ದ ಡಾವಿಡ್ ಮಲಾನ್ 39 ಎಸೆತಗಳಲ್ಲಿ 4 ಬೌಂಡರಿ ಸಮೇತ 32 ರನ್ ಗಳಿಸಿ ಔಟಾದರು. ನಾಯಕ ಜೋಸ್ ಬಟ್ಲರ್ ಕೇವಲ 9 ರನ್‌ಗಳಿಗೆ ಪೆವಿಲಿಯನ್ ಸೇರಿದರು.
ಈ ವೇಳೆ ಕ್ರೀಸ್‌ಗೆ ಬಂದು ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಹ್ಯಾರಿ ಬ್ರೂಕ್ 61 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 66 ರನ್ ಗಳಿಸಿ ವಿಕೆಟ್ ಒಪ್ಪಿಸುತ್ತಿದ್ದಂತೆ ಇಂಗ್ಲೆಂಡ್‌ನ ಸೋಲು ಖಚಿತವಾಯಿತು.
ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ 10 ರನ್, ಸ್ಯಾಮ್ ಕರ್ರಾನ್ 10 ರನ್, ಕ್ರಿಸ್ ವೋಕ್ಸ್ 9 ರನ್ ಗಳಿಸಿದರೆ, ಆದಿಲ್ ರಶೀದ್ 20 ರನ್, ಮಾರ್ಕ್ ವುಡ್ 18 ರನ್ ಮತ್ತು ರೀಸ್ ಟೋಪ್ಲೆ 15 ರನ್ ಗಳಿಸಿದರು. ಆದರೆ, ತಂಡವನ್ನು ಗೆಲುವಿನ ಗುರಿ ತಲುಪಿಸಲು ಸಾಧ್ಯವಾಗಲಿಲ್ಲ.

ಏಕದಿನ ವಿಶ್ವಕಪ್‌ನಲ್ಲಿ 12 ವರ್ಷಗಳ ನಂತರ ಮತ್ತೊಮ್ಮೆ ದುರ್ಬಲ ತಂಡದೆದುರು ಇಂಗ್ಲೆಂಡ್ ತೀರಾ ಅವಮಾನಕಾರಿಯಾಗಿ ಸೋಲು ಕಂಡಿತು.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಮಿಂಚಿದ ರಶೀದ್ ಖಾನ್ 9.3 ಓವರ್‌ಗಳಲ್ಲಿ 37 ರನ್ ನೀಡಿ 3 ವಿಕೆಟ್ ಪಡೆದರೆ, ಮುಜೀಬ್-ಉರ್-ರೆಹಮಾನ್ 10 ಓವರ್‌ಗಳಲ್ಲಿ 51 ರನ್ ನೀಡಿ 3 ವಿಕೆಟ್ ಕಬಳಿಸಿದರು. ಮೊಹಮ್ಮದ್ ನಬಿ 6 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಫಜಲ್ಹಕ್ ಫಾರೂಕಿ ಮತ್ತು ನವೀನ್-ಉಲ್-ಹಕ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 114 ರನ್‌ಗಳ ಜೊತೆಯಾಟ ನೀಡಿತು.

48 ಎಸೆತಗಳಲ್ಲಿ 3 ಬೌಂಡರಿ ಸಮೇತ 28 ರನ್ ಗಳಿಸಿದ್ದ ಇಬ್ರಾಹಿಂ ಝದ್ರಾನ್ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಹಮತ್ ಶಾ ಕೂಡ ಕೇವಲ 3 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ಇನ್ನು ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅವರು 57 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ 80 ರನ್ ಬಾರಿಸಿದರು. ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿದರೆ, ಅಜ್ಮತುಲ್ಲಾ ಒಮರ್ಜಾಯ್ ರನ್ ಗಳಿಸಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್ ಇಕ್ರಮ್ ಅಲಿಖಿಲ್ 66 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ಇನ್ನು ಮೊಹಮ್ಮದ್ ನಬಿ ಕೇವಲ 9 ರನ್‌ಗೆ ಔಟಾದರು.
ಕೊನೆಯಲ್ಲಿ ರಶೀದ್ ಖಾನ್ 22 ಎಸೆತಗಳಲ್ಲಿ 23 ರನ್, ಮುಜೀಬ್-ಉರ್-ರೆಹಮಾನ್ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 28 ರನ್ ಬಾರಿಸಿದರು. ಉಳಿದಂತೆ ನವೀನ್ ಉಲ್ ಹಕ್ 5 ರನ್ ಮತ್ತು ಫಜಲ್ಹಕ್ ಫಾರೂಕಿ 2 ರನ್ ಗಳಿಸಿ ತಂಡದ ಮೊತ್ತ 280ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಆದಿಲ್ ರಶೀದ್ 10 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮಾರ್ಕ್ ವುಡ್ 9 ಓವರ್‌ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ರೀಸ್ ಟೋಪ್ಲೆ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications