2023ರ ಐಸಿಸಿ ಏಕದಿನ ವಿಶ್ವಕಪ್ ಅಭಿಯಾನ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡಕ್ಕೆ ನಿಜಕ್ಕೂ ಸ್ಮರಣೀಯವಾಗಿದೆ. ಈ ತಂಡ ಇದೇ ಮೊದಲ ಬಾರಿಗೆ ಒಂದೇ ವಿಶ್ವಕಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಪ್ರಸಕ್ತ ವಿಶ್ವಕಪ್ ಹೊರತುಪಡಿಸಿದರೆ ಅಫ್ಘಾನಿಸ್ತಾನ ತಂಡ 2015ರ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನು ಗೆದ್ದಿತ್ತು. 2019ರ ವಿಶ್ವಕಪ್‌ನಲ್ಲಿ ಅಫ್ಘಾನ್ ತಂಡವು ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಭಾರತದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಆಡಿದ ಧಾಟಿಗೆ ಕ್ರಿಕೆಟ್ ಪಂಡಿತರು ಫುಲ್ ಮಾರ್ಕ್ಸ್ ನೀಡಿದ್ದಾರೆ.

ಪ್ರಸಕ್ತ ವಿಶ್ವಕಪ್‌ನ ಅಚ್ಚರಿಯ ಫಲಿತಾಂಶಗಳಲ್ಲಿ ಒಂದಾದ ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಎಲ್ಲರ ಚಿತ್ತ ಕದ್ದಿತ್ತು. 2019ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡವನ್ನು ಮಣಿಸುತ್ತಿದ್ದಂತೆ ಆಫ್ಘಾನ್ ತಂಡದ ಆತ್ಮವಿಶ್ವಾಸವೂ ಇಮ್ಮಡಿಯಾಯಿತು. ಈ ಮೂಲಕ ವಿಶ್ವಕಪ್‌ನಲ್ಲಿ ಉಳಿದ ತಂಡಗಳಿಗೆ ಎಚ್ಚರಿಕೆ ನೀಡಿತು.
ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 8 ವಿಕೆಟ್‌ಗಳಿಂದ 1992ರ ವಿಶ್ವ ಚಾಂಪಿಯನ್ ಹಾಗೂ ನೆರೆಯ ಪಾಕಿಸ್ತಾನ ತಂಡವನ್ನು ಮಣಿಸಿತು. ನಂತರ 1996ರ ವಿಶ್ವಕಪ್ ಗೆದ್ದ ತಂಡವಾದ ಶ್ರೀಲಂಕಾ ತಂಡವನ್ನೂ ಸೋಲಿಸಿ ಗೆಲುವಿನ ದಂಡಯಾತ್ರೆಯನ್ನು ಮುಂದೆವರೆಸಿತು.
ಈ ಮೂರು ಬಲಾಢ್ಯ ತಂಡಗಳನ್ನು ಸದೆಬಡಿದ ಆಫ್ಘಾನ್ ತಂಡ ನಂತರದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಾಲ್ಕನೇ ಗೆಲುವು ದಾಖಲಿಸಿತು. ಈ ಮೂಲಕ ಇದುವರೆಗೆ ಆಡಿದ 7 ಪಂದ್ಯಗಳ ಪೈಕಿ ಅಫ್ಘಾನಿಸ್ತಾನ ತಂಡ ಒಟ್ಟು 4 ಪಂದ್ಯ ಗೆದ್ದು 3 ಪಂದ್ಯಗಳಲ್ಲಿ ಸೋಲು ಕಂಡಿದೆ.
ಈ ಮೂಲಕ ಅಫ್ಘಾನಿಸ್ತಾನ ತಂಡವು ಪ್ರಸ್ತುತ ಒಟ್ಟು 8 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಕೂಡ ತಲಾ 8 ಅಂಕಗಳನ್ನು ಹೊಂದಿವೆ. ಆದರೆ ಕಿವೀಸ್ ಹಾಗೂ ಪಾಕ್ ತಂಡಗಳ ನೆಟ್ ರನ್ ರೇಟ್ ಅಫ್ಘಾನಿಸ್ತಾನ ತಂಡಕ್ಕಿಂತ ಉತ್ತಮವಾಗಿದೆ. ಆದ್ದರಿಂದ ಆ ಎರಡು ತಂಡಗಳು ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದೆ.

ಹೀಗಿರುವಾಗ ಸೆಮಿಫೈನಲ್ ರೇಸ್‌ನಲ್ಲಿ ಅಫ್ಘಾನಿಸ್ತಾನ ತಂಡ ಎಷ್ಟು ಮುಂದಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಇಲ್ಲಿಯವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಈಗ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಉಳಿದ ಎರಡು ಸ್ಥಾನಗಳಿಗಾಗಿ 6 ತಂಡಗಳ ನಡುವೆ ರೇಸ್ ಏರ್ಪಟ್ಟಿದೆ.
ಈ 6 ತಂಡಗಳ ಪೈಕಿ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಸೆಮಿಫೈನಲ್ ತಲುಪುವ ಸಾಧ್ಯತೆ ಈಗಾಗಲೇ ಕ್ಷೀಣಿಸಿದೆ. ಇದೇ ಸಮಯದಲ್ಲಿ, ಆಸ್ಟ್ರೇಲಿಯಾವು 7 ಪಂದ್ಯಗಳಿಂದ 10 ಅಂಕಗಳನ್ನು ಹೊಂದಿದೆ ಮತ್ತು ಅದು ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಆಸೀಸ್ ತಂಡವು ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈಗ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.
ಅಫ್ಘಾನಿಸ್ತಾನ ತಂಡವು ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದೆ. ಆಫ್ಘಾನ್ ತಮ್ಮ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಮತ್ತೆರಡು ಅಚ್ಚರಿಯ ಫಲಿತಾಂಶ ನೀಡಿದ್ದೇ ಆದಲ್ಲಿ, ಆಫ್ಘಾನ್ ಸೆಮಿಫೈನಲ್ ತಲುಪಲು ಯಾವುದೇ ತಂಡವನ್ನು ಅವಲಂಬಿಸಬೇಕಾಗಿಲ್ಲ.
ಆದರೆ ಎರಡೂ ಪಂದ್ಯಗಳನ್ನು ಗೆದ್ದ ನಂತರ, ಅಫ್ಘಾನಿಸ್ತಾನ ತಂಡ ನಾಲ್ಕನೇ ಸ್ಥಾನ ಅಲ್ಲ, ಮೂರನೇ ಅಥವಾ ಎರಡನೇ ಸ್ಥಾನವನ್ನು ಪಡೆಯಬಹುದು.
ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ, ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ ಒಟ್ಟು 10 ಅಂಕಗಳನ್ನು ಹೊಂದಲಿದೆ. ಹೀಗಾದರೆ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಅಫ್ಘಾನಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸೋತರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಗೆದ್ದರೂ ಉಪಾಂತ್ಯದ ಆಸೆ ಜೀವಂತವಾಗಿರುತ್ತದೆ. ಆದರೆ, ಬೇರೆ ತಂಡಗಳ ಫಲಿತಾಂಶದ ಮೇಲೆ ಇವರ ಸೆಮೀಸ್ ಆಸೆ ನಿಂತಿರುತ್ತದೆ.