ಮಂಗಳವಾರ, ನವೆಂಬರ್ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವಿನೊಂದಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಂತರ, ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೂರನೇ ತಂಡವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ ಇಬ್ರಾಹಿಂ ಝದ್ರಾನ್ ಅಜೇಯ 129 ರನ್‌ಗಳ ತಮ್ಮ ತಂಡದ ಮೊದಲ ಏಕದಿನ ವಿಶ್ವಕಪ್ ಶತಕದೊಂದಿಗೆ 5 ವಿಕೆಟ್‌ಗೆ 291 ರನ್ ಕಲೆಹಾಕಿತು.

292 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ದೊಡ್ಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಮುರಿಯದ 8 ವಿಕೆಟ್‌ಗೆ 202 ಜೊತೆಯಾಟದ ಮೂಲಕ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ತಮ್ಮ ತಂಡಕ್ಕೆ ರೋಮಾಂಚಕ ಗೆಲುವು ತಂದುಕೊಟ್ಟರು.
ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ 128 ಎಸೆತಗಳನ್ನು ಎದುರಿಸಿ 21 ಬೌಂಡರಿಗಳು ಹಾಗೂ 10 ಭರ್ಜರಿ ಸಿಕ್ಸರ್‌ಗಳ ಸಮೇತ ಅಜೇಯ 201 ರನ್‌ಗಳ ಭರ್ಜರಿ ದ್ವಿಶತಕ ಸಿಡಿಸಿದರು. ಪ್ಯಾಟ್ ಕಮ್ಮಿನ್ಸ್ ಔಟಾಗದೆ 12 ರನ್ ಗಳಿಸಿದರು.

ಇನ್ನು ಆಡಿದ ಎಂಟು ಪಂದ್ಯಗಳಲ್ಲಿ ಸತತ ಆರು ಗೆಲುವಿನೊಂದಿಗೆ ಆಸ್ಟ್ರೇಲಿಯಾ ತನ್ನ ಅಂಕಗಳನ್ನು 12ಕ್ಕೆ ಏರಿಸಿಕೊಂಡಿತು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಎರಡು ಪಂದ್ಯಗಳನ್ನು ಸೋತ ಬಳಿಕ ಆಸ್ಟ್ರೇಲಿಯಾ ತಂಡ ಅದ್ಭುತ ರೀತಿಯಲ್ಲಿ ಪುಟಿದೆದ್ದಿದೆ.
ಇದೀಗ ಈ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದ್ದು, ಕಡಿಮೆ ನೆಟ್ ರನ್‌ರೇಟ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕಿಂತ ಹಿಂದೆ ಇದೆ. ಭಾರತ ತಂಡ ಆಡಿದ 8 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಶನಿವಾರ, ನವೆಂಬರ್ 11ರಂದು ಪುಣೆಯಲ್ಲಿ ನಡೆಯಲಿರುವ ತನ್ನ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಅಫ್ಘಾನಿಸ್ತಾನ ಎಂಟು ಪಂದ್ಯಗಳ ನಂತರ, ನಾಲ್ಕು ಗೆಲುವು ಮತ್ತು ನಾಲ್ಕು ಸೋಲಿನ ಮೂಲಕ 8 ಅಂಕಗಳೊಂದಿಗೆ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳೊಂದಿಗೆ ಸಮನಾಗಿದೆ. ಆದರೆ ನೆಟ್ ರನ್‌ರೇಟ್‌ನಲ್ಲಿ ಹಿಂದುಳಿದಿದೆ.
ಇನ್ನು ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಯಾವುದೇ ಅವಕಾಶವನ್ನು ಹೊಂದಲು ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ತಂಡವು ಶುಕ್ರವಾರ ಅಹಮದಾಬಾದ್‌ನಲ್ಲಿ ಗೆಲ್ಲಲೇಬೇಕಾದ ಅಂತಿಮ ಲೀಗ್-ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.