ಮಂಗಳವಾರ, ಅಕ್ಟೋಬರ್ 10ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಎಂಟನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕುಸಲ್ ಮೆಂಡೀಸ್ ಮತ್ತು ಸದೀರ ಸಮರವಿಕ್ರಮ ಅವರ ಅಮೋಘ ಶತಕದ ನೆರವಿನಿಂದ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಕಲೆಹಾಕಿದ್ದು, ಪಾಕಿಸ್ತಾನ ತಂಡಕ್ಕೆ 345 ರನ್‌ಗಳ ಗುರಿ ನೀಡಿದೆ.

ಶ್ರೀಲಂಕಾದ ಇನ್ನಿಂಗ್ಸ್ ಆರಂಭಿಸಿದ ಕುಸಲ್ ಪೆರೆರಾ ಸೊನ್ನೆಗೆ ಔಟಾದರೆ, ಪಾಥುಮ್ ನಿಸ್ಸಾಂಕ 61 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು.
ನಂತರ ಬಂದ ಕುಸಲ್ ಮೆಂಡೀಸ್ 77 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 122 ರನ್‌ಗಳ ಭರ್ಜರಿ ಶತಕ ಸಿಡಿಸಿದರು. ಸದೀರ ಸಮರವಿಕ್ರಮ 89 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.
ಚರಿತ ಅಸಲಂಕಾ 1 ರನ್, ಧನಂಜಯ್ ಡಿ ಸಿಲ್ವ 25 ರನ್, ದಸುನ್ ಶನಕ 12 ರನ್, ದುನಿತ್ ವೆಲ್ಲಲಾಗೆ 10 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 340ರ ಗಡಿ ದಾಟಿಸಿದರು.

ಪಾಕಿಸ್ತಾನ ತಂಡದ ಪರ ಬೌಲಿಂಗ್‌ನಲ್ಲಿ ಹಸನ್ ಅಲಿ 10 ಓವರ್‌ಗಳಲ್ಲಿ 71 ರನ್ ನೀಡಿ 4 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 10 ಓವರ್‌ಗಳಲ್ಲಿ 64 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಶಾಹೀನ್ ಅಫ್ರಿದಿ, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.