ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.20 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಮಧ್ಯೆ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿತು.
ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 1992ರಿಂದ ಭಾರತ ವಿರುದ್ಧ ಸತತ 8ನೇ ಸೋಲು ಅನುಭವಿಸಿದ ಪಾಕಿಸ್ತಾನ ತಂಡ ತನ್ನ ಕಳಪೆ ದಾಖಲೆ ಮುಂದುವರೆಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 30.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
ಇದೀಗ ಶುಕ್ರವಾರ, ಅಕ್ಟೋಬರ್ 20ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯವನ್ನಾಡಲು ಉದ್ಯಾನಗಳ ನಗರಿಗೆ ಆಗಮಿಸಿದೆ.

ಭಾನುವಾರವೇ ಬೆಂಗಳೂರಿಗೆ ಬರುತ್ತಿದ್ದಂತೆಯೇ ರೆಸಿಡೆನ್ಸಿ ರಸ್ತೆಯಲ್ಲಿರುವ ಐಷಾರಾಮಿ ರಿಟ್ಜ್ ಕಾರ್ಲ್ಟನ್ ಹೋಟೆಲ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ 29ನೇ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿತು.
"ಇದು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸಿದ ಸಣ್ಣ ಸಮಾರಂಭವಾಗಿತ್ತು. ಇಂದು ಪ್ರಯಾಣದ ದಿನವಾದ್ದರಿಂದ ಹೆಚ್ಚಿನ ಚಟುವಟಿಕೆಗಳು ಇರಲಿಲ್ಲ ಮತ್ತು ಮುಂಬರುವ ಪಂದ್ಯಗಳಿಗೆ ತಂಡವು ಶೀಘ್ರದಲ್ಲೇ ಸಿದ್ಧತೆಗಳನ್ನು ಪ್ರಾರಂಭಿಸುತ್ತದೆ," ಎಂದು ಪಾಕಿಸ್ತಾನ ತಂಡದೊಂದಿಗೆ ಪ್ರಯಾಣಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಹೈದರಾಬಾದ್‌ನಂತೆ ಬೆಂಗಳೂರಿನಲ್ಲಿಯೂ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆದರದ ಆತಿಥ್ಯ ಸಿಕ್ಕಿದೆ. ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ ಹೀನಾಯ ಸೋಲನುಭವಿಸಿದರೂ, ಪಾಕಿಸ್ತಾನ ತಂಡದ ಆಟಗಾರರ ಮುಖದಲ್ಲಿ ಮಂದಹಾಸವೇನೂ ಕಡಿಮೆಯಾಗಿಲ್ಲ.
ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡವು ಸೋಮವಾರದಂದು ಐಷಾರಾಮಿ ರಿಟ್ಜ್ ಕಾರ್ಲ್ಟನ್ ಹೋಟೆಲ್‌ನಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿತ್ತು. ಪಾಕಿಸ್ತಾನ ತಂಡದ ಆಟಗಾರರು ತರತರದ ಖಾದ್ಯಗಳ ಭೂರಿ-ಭೋಜನ ಸವಿದರು.
ನಾಯಕ ಬಾಬರ್ ಅಜಂ, ಇಮಾಮ್-ಉಲ್-ಹಕ್, ಶಾಹೀನ್ ಅಫ್ರಿದಿ ಸೇರಿದಂತೆ ಹಲವು ಆಟಗಾರರು ಹೋಟೆಲ್‌ನಲ್ಲಿ ಬಗೆಬಗೆಯ ಊಟ ತಿಂದರು. ನಂತರ, ಹೋಟೆಲ್‌ನ ಸಿಬ್ಬಂದಿ ಜೊತೆಗೆ ಪಾಕಿಸ್ತಾನ ತಂಡದ ಆಟಗಾರರು ಸೆಲ್ಫಿಗೆ ಪೋಸ್ ನೀಡಿದರು. ಹೈದರಾಬಾದ್‌ನಂತೆ ಬೆಂಗಳೂರಿನಲ್ಲಿ ಪಾಕಿಸ್ತಾನ ಆಟಗಾರರನ್ನು ಮುತ್ತಿಕೊಳ್ಳುವಂತಹ ವಾತಾವರಣ ಕಂಡುಬಂದಿಲ್ಲ.
2012ರ ನಂತರ ಬೆಂಗಳೂರಿಗೆ ಇದು ಪಾಕಿಸ್ತಾನ ಕ್ರಿಕೆಟ್ ತಂಡದ ಮೊದಲ ಭೇಟಿಯಾಗಿದೆ. ಅಂದು ಎರಡು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ್ದರು.
ಪಾಕಿಸ್ತಾನ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ ಎರಡು ಏಕದಿನ ಪಂದ್ಯಗಳನ್ನು ಆಡಿದೆ. 1996ರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಮತ್ತು 1999ರಲ್ಲಿ ಪೆಪ್ಸಿ ಕಪ್‌ನ ಫೈನಲ್‌ನಲ್ಲಿ ಆಡಿತ್ತು.
ಮೆನ್ಸ್ ಇನ್ ಬ್ಲ್ಯೂ 1996ರ ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಸೋತಿದ್ದರೆ, ಪೆಪ್ಸಿ ಕಪ್‌ನಲ್ಲಿ ಭಾರತವನ್ನು 123 ರನ್‌ಗಳಿಂದ ಸೋಲಿಸಿತ್ತು.
"ಬೆಂಗಳೂರು ನಗರ ನಮ್ಮನ್ನು ಸ್ವಾಗತಿಸಿದೆ ಮತ್ತು ಇಲ್ಲಿರುವುದಕ್ಕೆ ನಮಗೆ ಸಂತೋಷವಾಗಿದೆ. ಇಲ್ಲಿನ ವಾತಾವರಣವೂ ತುಂಬಾ ತಂಪಾಗಿದೆ. ಆಶಾದಾಯಕವಾಗಿ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಕೆಲವು ವರದಿಗಳನ್ನು ನಾವು ನೋಡಿರುವುದರಿಂದ, ಬೆಂಗಳೂರಿನಲ್ಲಿ ಮಳೆ ಬರುವುದಿಲ್ಲ ಎಂಬ ನಂಬಿಕೆ ಇದೆ," ಎಂದು ಪಿಸಿಬಿ ಅಧಿಕಾರಿ ತಿಳಿಸಿದರು.
ಮುಂಬರುವ 2023ರ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಮಂಗಳವಾರ, ಅಕ್ಟೋಬರ್ 17ರಿಂದ ಕೌಂಟರ್ ಟಿಕೆಟ್ ಮಾರಾಟವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಭಾನುವಾರ ತಿಳಿಸಿದೆ.
ಮಂಗಳವಾರದಿಂದ ಗುರುವಾರದವರೆಗೆ ಕಬ್ಬನ್ ರಸ್ತೆ ಮತ್ತು ಕ್ವೀನ್ಸ್ ರಸ್ತೆಯಲ್ಲಿರುವ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕಡಿಮೆ ಟಿಕೆಟ್ ದರ (ಎಚ್-ಲೋವರ್ ಸ್ಟ್ಯಾಂಡ್) 1000 ರೂಪಾಯಿ ಆಗಿದ್ದರೆ, ಹೆಚ್ಚಿನ ಪಿ-ಟೆರೇಸ್ ಬೆಲೆ 25,000 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇದೇ ದರವು ನವೆಂಬರ್ 4ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಟಿಕೆಟ್‌ಗಳಿಗೂ ಅನ್ವಯಿಸುತ್ತದೆ.