ವಿಶ್ವಕಪ್: ವಾರ್ನರ್, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್ ಹೇಳಿದ್ದೇನು?

ಮೆಲ್ಬೋರ್ನ್, ಮೇ 14: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷ ಈ ಹೊತ್ತಿಗಾಗಲೇ ಬಾಲ್ ಟ್ಯಾಂಪರಿಂಗ್ ಮತ್ತು ಕಳಪೆ ಫಾರ್ಮ್‌ನಿಂದಾಗಿ ಕಂಗಾಲಾಗಿ ಹೋಗಿದ್ದ ಹಾಲಿ ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡ ಇದೀಗ ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಗರಿಗೆದರಿ ನಿಂತಿದೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಬಾಲ್ ಟ್ಯಾಂಪರಿಂಗ್ ನಡೆಸಿ ತಪ್ಪೊಪ್ಪಿಗೆ ನೀಡಿದ್ದ ಕಾಂಗರೂ ಪಡೆಯ ಅಂದಿನ ನಾಯಕ ಸ್ಟೀವನ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ , ಕ್ರಿಕೆಟ್ ಆಸ್ಟ್ರೇಲಿಯಾದಿಂದ ಬರೋಬ್ಬರಿ 13 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಈ ಇಬ್ಬರೂ ಆಟಗಾರರು ತಮ್ಮ ರಾಷ್ಟ್ರೀಯ ತಂಡಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಕೋಚ್ ಡರ್ರೆನ್ ಲೆಹ್ಮನ್, ಮುಂಬರುವ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಉಳಿಸಿಕೊಳ್ಳಲು ಮಹತ್ವದ ಪಾತ್ರ ವಹಿಸುವಂತೆ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ಗೆ ಸಲಹೆ ನೀಡಿದ್ದಾರೆ. ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಕೋಚ್ ಲೆಹ್ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ನಿಷೇದದ ದಿನಗಳಲ್ಲಿ ಸ್ಮಿತ್ ಮತ್ತು ವಾರ್ನರ್ ಇಬ್ಬರೂ ಭುಜದ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇದರಿಂದ ಚೇತರಿಸಿದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ತಮ್ಮ ಫ್ರಾಂಚೈಸಿ ತಂಡಗಳ ಪರ ಆಡಿದ ಆಸೀಸ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಲಯ ಕಂಡುಕೊಂಡಿದ್ದರು.
"ಸ್ಮಿತ್ , ನಂ.3 ಅಥವಾ ನಂ.4 ಸ್ಥಾನದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತವಾಗಿ ಆಡಬಲ್ಲರು. ಅವರು 12 ತಿಂಗಳ ವಿರಾಮದ ಬಳಿಕ ಕ್ರಿಕೆಟ್‌ಗೆ ಮರಳಿರುವುದರಿಂದ ಅವರ ಫಾರ್ಮ್ ಕುರಿತಾಗಿ ಹಲವರಿಗೆ ಚಿಂತೆಯಿದೆ. ಆದರೆ, ಐಪಿಎಲ್‌ನಲ್ಲಿ ಅವರು ಅಬ್ಬರಿಸಿರುವುದನ್ನು ನೀವು ನೋಡಿದ್ದೀರಿ. ಡೇವಿಡ್ ವಾರ್ನರ್ ರನ್ ಮಷಿನ್ ಇದ್ದಹಾಗೆ, ಅಗ್ರ ಕ್ರಮಾಂಕದಲ್ಲಿ ಅವರು ಕಿಚ್ಚು ಹಚ್ಚಬಲ್ಲರು. ಅವರು ಉತ್ತಮ ಟೂರ್ನಿಯನ್ನಾಡಿದರೆ, ತಂಡಕ್ಕೆ ವಿಶ್ವಕಪ್ ಗೆಲುವಿನ ಹಾದಿಯನ್ನು ಸುಗಮವಾಗುತ್ತದೆ. ಕಳೆದ ವಿಶ್ವಕಪ್‌ನಲ್ಲೂ ಅವರು ಇದೇ ರೀತಿ ಆಡಿದ್ದರು. ಆರೊನ್ ಫಿಂಚ್ ಜೊತೆಗೂಡಿ ಅವರು ಈ ಬಾರಿಯೂ ಅಂಥದ್ದೇ ಆಟವಾಡಿದರೆ ನಮ್ಮ ತಂಡವನ್ನು ತಡೆಯಲಾಗದು,'' ಎಂದು ಲೆಹ್ಮನ್ ಹೇಳಿದ್ದಾರೆ.
ವಾರ್ನರ್‌ಗೆ 3ನೇ ಕ್ರಮಾಂಕ?
ಕ್ರಿಕೆಟ್ ಜಗತ್ತಿನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅಬ್ಬರಿಸಿ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಡೇವಿಡ್ ವಾರ್ನರ್‌ಗೆ ಇದೀಗ ಕಾಂಗರೂ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಭೀತಿ ಕಾಡುತ್ತಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ 11 ಮತ್ತು ನ್ಯೂಜಿಲೆಂಡ್ 11 ನಡುವಣ ಅಭ್ಯಾಸ ಪಂದ್ಯಗಳಲ್ಲಿ ಹಾಲಿ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಡೇವಿಡ್ ವಾರ್ನರ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ, ಆರಂಭಿಕರಾಗಿ ಆರೊನ್ ಫಿಂಚ್ ಮತ್ತು ಉಸ್ಮಾನ್ ಖವಾಜ ಅವರನ್ನು ಮುಂದುವರಿಸಿದ್ದರು. ಆದರೆ, ವಿಶ್ವಕಪ್‌ನಲ್ಲಿ ವಾರ್ನರ್ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವಾರ್ನರ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೇವಿಡ್ ವಾರ್ನರ್, ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ 12 ಪಂದ್ಯಗಳಿಂದ 70ರ ಸರಾಸರಿಯಲ್ಲಿ692 ರನ್‌ಗಳನ್ನು ಚಚ್ಚಿದ್ದಾರೆ. ಆಂದಹಾಗೆ ಇಷ್ಟೂ ರನ್‌ಗಳನ್ನು ಅವರು ಗಳಿಸಿರುವುದು ಆರಂಭಿಕ ಬ್ಯಾಟ್ಸ್‌ಮನ್ ಆಗಿ. ರಾಷ್ಟ್ರೀಯ ತಂಡದ ಪರ ಮರಳಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವ ಉದ್ದೇಶದಿಂದಲೇ ಅವರು ರೈಸರ್ಸ್ ಪರ ಇನಿಂಗ್ಸ್ ಆರಂಭಿಸಿ ರನ್ ಹೊಳೆ ಹರಿಸಿದ್ದರು.
ಆರಂಭಿಕಾರಾಗೇ ಆಡಲಿ
ಇದೇ ವೇಳೆ ಡೇವಿಡ್ ವಾರ್ನರ್ ಅವರನ್ನು ಆರಂಭಿಕರಾಗಿ ಆಡಿಸುವುದು ಒಳಿತು ಎಂದು ಮಾಜಿ ಕೋಚ್ ಡರ್ರೆನ್ ಲೆಹ್ಮನ್ ಅಭಿಪ್ರಾಯಪಟ್ಟಿದ್ದಾರೆ. "ಫಿಂಚ್ ಮತ್ತು ವಾರ್ನರ್ ಇನಿಂಗ್ಸ್ ಆರಂಭಿಸಿದರೆ ಖವಾಜಾ ಅಥವಾ ಶಾನ್ ಮಾರ್ಷ್ 3ನೇ ಕ್ರಮಾಂಕದಲ್ಲಿ ಆಡಬೇಕು. 4ನೇ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ ಆಡಿದರೆ ಉತ್ತಮ ಎಂದು ಲೆಹ್ಮನ್," ಹೇಳಿದ್ದಾರೆ.
ಆಸ್ಟ್ರೇಲಿಯಾದ ವಿಶ್ವಕಪ್ ತಂಡ ಇಂತಿದೆ
ಆರೊನ್ ಫಿಂಚ್ (ನಾಯಕ), ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್, ನೇಥನ್ ಕೌಲ್ಟರ್ ನೈಲ್, ಜೇಸನ್ ಬೆಹ್ರೆನ್‌ಡಾರ್ಫ್, ನೇಥನ್ ಲಯಾನ್, ಆಡಮ್ ಝಾಂಪ. ಆಸ್ಟ್ರೇಲಿಯಾ ತಂಡ ಜೂನ್ 1ರಂದು ಅಫಘಾನಿಸ್ತಾನ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications