ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವು ಭಾರತ ವಿರುದ್ಧ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ.
ಬಹು ನಿರೀಕ್ಷಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ, ನಾಯಕ ಬಾಬರ್ ಅಜಂ ಅವರ ಏಕೈಕ ಅರ್ಧಶತಕದ ನೆರವಿನಿಂದ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆತಿಥೇಯ ಭಾರತ ತಂಡಕ್ಕೆ 192 ರನ್‌ಗಳ ಸುಲಭ ಗುರಿ ನೀಡಲಾಗಿದೆ.

ಪಾಕಿಸ್ತಾನ ತಂಡದ ಆರಂಭಿಕರಾದ ಇಮಾಮ್-ಉಲ್-ಹಕ್ 38 ಎಸೆತಗಳಲ್ಲಿ 6 ಬೌಂಡರಿ ಸಮೇತ 36 ರನ್ ಹಾಗೂ ಅಬ್ದುಲ್ಲಾ ಶಫೀಕ್ 20 ರನ್ ಗಳಿಸಿ ಔಟಾಗುವ ಮುನ್ನ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿದರು.
ನಂತರ ಬಂದ ನಾಯಕ ಬಾಬರ್ ಅಜಂ ಅವರು ಭಾರತ ವಿರುದ್ಧ ತಮ್ಮ ಮೊದಲ ಅರ್ಧಶತಕ ಬಾರಿಸಿದರು. 58 ಎಸೆತಗಳಲ್ಲಿ 7 ಬೌಂಡರಿ ಸಮೇತ 50 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಮೊಹ್ಮಮದ್ ರಿಜ್ವಾನ್ 69 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 49 ರನ್ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.

ಬಳಿಕ ಬಂದ ಪಾಕಿಸ್ತಾನ ತಂಡದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲು ವಿಫಲರಾದರು. ಸೌದ್ ಶಕೀಲ್ 6 ರನ್, ಇಫ್ತಿಕರ್ ಅಹ್ಮದ್ 4 ರನ್, ಶಾದಾಬ್ ಖಾನ್ 2 ರನ್ ಗಳಿಸಿದರು.ಮೊಹಮ್ಮದ್ ನವಾಜ್ 4 ರನ್, ಹಸನ್ ಅಲಿ 12 ರನ್, ಶಾಹೀನ್ ಅಫ್ರಿದಿ 2 ರನ್ ಮತ್ತು ಹ್ಯಾರಿಸ್ ರೌಫ್ 2 ರನ್ ಮಾತ್ರ ಗಳಿಸಲು ಶಕ್ತರಾದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 7 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 10 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಕಬಳಿಸಿದರು.

ರವೀಂದ್ರ ಜಡೇಜಾ 9.5 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 6 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಸ್ವಲ್ಪ ದುಬಾರಿಯಾದ ಮೊಹಮ್ಮದ್ ಸಿರಾಜ್ 8 ಓವರ್‌ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆಯಲು ಯಶಸ್ವಿಯಾದರು.