
ಲಂಡನ್, ಜೂನ್ 18: ಭಾನುವಾರ (ಜೂನ್ 16) ಭಾರತ vs ಪಾಕಿಸ್ತಾನ ತಂಡಗಳ ಕುತೂಹಲಕಾರಿ ಕದನದಲ್ಲಿ ಭಾರತ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಟ್ವೀಟ್ ಮಾಡಿದ್ದರು. ಇದರಲ್ಲಿ ಸಣ್ಣಗೆ ಸುರಿಯುತ್ತಿರುವ ಮಳೆಯತ್ತ ಕೊಹ್ಲಿ ದಿಟ್ಟಿಸುತ್ತಿರುವ ಚಿತ್ರವಿತ್ತು. ಇದೇ ಚಿತ್ರದ ಜೊತೆಗೆ ಕೊಹ್ಲಿ ಮತ್ತೊಂದು ವಿಶೇಷ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು.
ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿನ ಪಂದ್ಯದ ವೇಳೆ ಕೊಹ್ಲಿ ಮಳೆಯತ್ತ ದಿಟ್ಟಿಸುತ್ತಿರುವ ರೀತಿಯಲ್ಲೇ 1990ರ ಇಸವಿಯಲ್ಲಿ ಎಳೆಯ ಕೊಹ್ಲಿ, ಸೊಂಟಕ್ಕೆ ಕೈಯನ್ನಿರಿಸಿ ಆಕಾಶ ದಿಟ್ಟಿಸುತ್ತಿರುವ ಫೋಟೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಕೊಹ್ಲಿ, '1990ರಿಂದಲೇ ನಾನಿದನ್ನು ಮಾಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದರು.
ವಿಶ್ವಕಪ್‌ನಲ್ಲಿ 7ನೇ ಬಾರಿಗೆ ಮುಖಾಮುಖಿಯಾಗಿದ್ದ ಭಾರತ-ಪಾಕಿಸ್ತಾನ ತಂಡಗಳ ಈ ಸೆಣಸಾಟದಲ್ಲಿ ಭಾರತ 89 ರನ್‌ಗಳ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗಳಿಸಿತ್ತು. ರೋಹಿತ್ ಶರ್ಮಾ ಈ ಪಂದ್ಯದಲ್ಲಿ 140 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಕೊಹ್ಲಿ 77 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 5 ವಿಕೆಟ್ ನಷ್ಟದಲ್ಲಿ 336 ರನ್ ಗಳಿಸಿತ್ತು. ಮಳೆಯ ಕಾರಣ ಪಾಕ್‌ಗೆ 40 ಓವರ್‌ಗಳಲ್ಲಿ 302 ರನ್ ಗುರಿ ನೀಡಲಾಗಿತ್ತು. ಗುರಿ ಬೆಂಬತ್ತಿದ ಪಾಕಿಸ್ತಾನ 40 ಓವರ್‌ಗಳಲ್ಲಿ 6 ವಿಕೆಟ್ ಕಳೆದು 212 ರನ್ ಬಾರಿಸಿ ಶರಣಾಗಿತ್ತು. ಇದು ವಿಶ್ವಕಪ್‌ನಲ್ಲಿ ಪಾಕ್ ಅನುಭವಿಸಿದ ಸತತ 7ನೇ ಸೋಲು.