ಮುಂಬೈ, ಜುಲೈ 21: ಮುಂಬರುವ ವಿಶ್ವ ಟ್ವೆಂಟಿ 20 ಸಮರವನ್ನು ಆಯೋಜಿಸುವ ಹೊಣೆಯನ್ನು ಹೊತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯ ನಡೆಯುವ ಕ್ರೀಡಾಂಗಣಗಳ ವಿವರವನ್ನು ಮಂಗಳವಾರ ಪ್ರಕಟಿಸಿದೆ. ಬೆಂಗಳೂರಿನಲ್ಲೂ ಪಂದ್ಯ ಆಯೋಜನೆಗೊಂಡಿದ್ದು, ಕೋಲ್ಕತ್ತಾದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.
2016ರ ಮಾರ್ಚ್ 11 ರಿಂದ ಏಪ್ರಿಲ್ 3 ರ ತನಕ ವಿಶ್ವಟಿ20 ಟೂರ್ನಿ ಜರುಗಲಿದೆ. ಇದುವರೆವಿಗೂ ಐದು ಬಾರಿ ಐಸಿಸಿ ಟಿ20 ಟೂರ್ನಿಯನ್ನು ನಡೆಸಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಟಿ20 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಟಿ20 ಟೂರ್ನಿಯನ್ನು ಧೋನಿ ನೇತೃತ್ವದ ಟೀಂ ಇಂಡಿಯಾ ಗೆದ್ದುಕೊಂಡಿತ್ತು.[ಚಾಂಪಿಯನ್ಸ್ ಲೀಗ್ ಟಿ20 ರದ್ದು ಮಾಡಿದ ಬಿಸಿಸಿಐ]
ಈ ಬಾರಿ ಬೆಂಗಳೂರು ಸೇರಿದಂತೆ ಚೆನ್ನೈ, ಧರ್ಮಶಾಲ, ಮೊಹಾಲಿ, ಮುಂಬೈ, ನಾಗಪುರ ಹಾಗೂ ನವದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಟಿ20 ಪಂದ್ಯಾವಳಿ ಆಯೋಜನೆಗೊಂಡಿದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಚುಟುಕು ಕ್ರಿಕೆಟ್ ಟೂರ್ನಿಯನ್ನು ಯಾವ ದೇಶವು ಎರಡು ಬಾರಿ ಗೆದ್ದು ಚಾಂಪಿಯನ್ ಎನಿಸಿಕೊಂಡಿಲ್ಲ. 2007ರಲ್ಲಿ ಭಾರತ, 2009ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂಡ್, 2012ರಲ್ಲಿ ವೆಸ್ಟ್ ಇಂಡೀಸ್ ಹಾಗೂ 2014ರಲ್ಲಿ ಶ್ರೀಲಂಕಾ ಟೂರ್ನಿಯ ಚಾಂಪಿಯನ್ ಆಗಿ ಟ್ರೋಫಿ ಎತ್ತಿದ್ದವು. [2019ರ ತನಕ ಐಸಿಸಿ ಟೂರ್ನಿ ವೇಳಾಪಟ್ಟಿ]
ವಿಶ್ವ ಟಿ20 ಟೂರ್ನಿ ಆಯೋಜನೆಗಾಗಿ ಸಮಿತಿ ನೇಮಿಸಲಾಗಿದ್ದು, ಬಿಸಿಸಿಐ ಅಧ್ಯಕ್ಷ ಜಗ್ಮೋಹನ್ ದಾಲ್ಮಿಯಾ ಅವರು ನೇತೃತ್ವ ವಹಿಸಿದ್ದಾರೆ. ಉಳಿದಂತೆ ಸಮಿತಿಯಲ್ಲಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ, ಉಪಾಧ್ಯಕ್ಷ ಜಿ ಗಂಗರಾಜು, ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹಾಗೂ ಮುಂಬೈ ಕ್ರಿಕೆಟ್ ಮಂಡಳಿ ಉಪಾಧ್ಯಕ್ಷ ಆಶೀಶ್ ಶೆಲಾರ್, ಒರಿಸ್ಸಾದ ಆಶೀರ್ವಾದ್ ಬೆಹೆರಾ ಇದ್ದಾರೆ. (ಒನ್ ಇಂಡಿಯಾ ಸುದ್ದಿ)