ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್: 42 ಅಂಕ ಪಡೆದ ಭಾರತಕ್ಕಿಂತ 24 ಅಂಕ ಪಡೆದ ತಂಡಕ್ಕೆ ಅಗ್ರಸ್ಥಾನ!

ಬ್ರಿಸ್ಬೇನ್‌ನ ಗಾಬಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2021-22ನೇ ಸಾಲಿನ ಆ್ಯಶಸ್ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 9 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದ್ದು, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಈ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ಈ ಮೂಲಕ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆಟಗಾರರು ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಅಕ್ಷರಶಃ ತತ್ತರಿಸಿದರು. ಹೀಗೆ ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ದಾಳಿ ಎದುರು ಮಂಕಾದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ನೆಲಕಚ್ಚಿದ ಇಂಗ್ಲೆಂಡ್ ಬೌಲಿಂಗ್‌ನಲ್ಲೂ ಸಹ ಭಾರಿ ಹಿನ್ನಡೆಯನ್ನು ಅನುಭವಿಸಿತು. ಅತ್ತ ಇಂಗ್ಲೆಂಡ್ ತಂಡದ ಆಟಗಾರರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಿ ಬರೋಬ್ಬರಿ 425 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗೆ ಮೊದಲ ಇನಿಂಗ್ಸ್ ಅಂತ್ಯಕ್ಕೆ ಆಸ್ಟ್ರೇಲಿಯಾ 278 ರನ್‌ಗಳ ಬೃಹತ್ ಮುನ್ನಡೆಯನ್ನು ಸಾಧಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ನೆಲಕಚ್ಚಿದ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಡೇವಿಡ್ ಮಲನ್ ಮತ್ತು ಜೋ ರೂಟ್ ಜವಾಬ್ದಾರಿಯುತ ಪ್ರದರ್ಶನದಿಂದ ಉತ್ತಮ ಹಂತವನ್ನು ತಲುಪುವ ನಿರೀಕ್ಷೆ ಹುಟ್ಟುಹಾಕಿತ್ತಾದರೂ ನಾಲ್ಕನೇ ದಿನದಾಟದಂದು ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 297 ರನ್‌ಗಳಿಗೆ ಆಲ್ ಔಟ್ ಆಗಿ ಕೇವಲ 19 ರನ್ ಮುನ್ನಡೆ ಸಾಧಿಸಿ ಆಸ್ಟ್ರೇಲಿಯಾಗೆ 20 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 20 ರನ್ ಕಲೆಹಾಕಿ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಕೆಲ ಬದಲಾವಣೆಗಳಿಗೆ ಕಾರಣವಾಗಿದೆ. ಹೀಗೆ ಆಶಸ್ ಸರಣಿಯ ಚೊಚ್ಚಲ ಟೆಸ್ಟ್ ಪಂದ್ಯದ ಫಲಿತಾಂಶ ಹೊರಬಿದ್ದ ಕೂಡಲೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣೆಗಳ ವಿವರ ಈ ಕೆಳಕಂಡಂತಿದೆ..

ಆಶಸ್ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿ ಹೀಗಿದೆ
ಇದುವರೆಗೂ ಒಟ್ಟು 1 ಸರಣಿಯನ್ನು ಆಡಿರುವ ಶ್ರೀಲಂಕಾ ಆ ಸರಣಿಯ ಎಲ್ಲಾ 2 ಪಂದ್ಯಗಳಲ್ಲಿಯೂ ಜಯ ಗಳಿಸುವುದರ ಮೂಲಕ 24 ಅಂಕ ಮತ್ತು ಗೆಲುವಿನ ಶೇಕಡಾಂಶ 100ನ್ನು ಪಡೆದುಕೊಂಡಿದೆ. ಈ ಮೂಲಕ ಯಾವುದೇ ಡ್ರಾ, ಸೋಲು ಮತ್ತು ಪೆನಾಲ್ಟಿಗೆ ಒಳಗಾಗದೇ ಇರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡು ಕೇವಲ ಒಂದೇ ಒಂದು ಪಂದ್ಯವನ್ನಾಡಿ ಅದರಲ್ಲಿ ಜಯ ಸಾಧಿಸಿ 12 ಅಂಕಗಳೊಂದಿಗೆ 100 ಗೆಲುವಿನ ಶೇಕಡಾಂಶ ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ.
ಇದುವರೆಗೂ ಒಟ್ಟು 2 ಸರಣಿಗಳನ್ನು ಆಡಿರುವ ಪಾಕಿಸ್ತಾನ ಆ ಸರಣಿಗಳ ಪೈಕಿ 3 ಪಂದ್ಯಗಳಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು, 36 ಅಂಕಗಳನ್ನು ಪಡೆದುಕೊಂಡು, 75 ಗೆಲುವಿನ ಶೇಕಡಾಂಶದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು ಇದುವರೆಗೂ ಒಟ್ಟು 2 ಟೆಸ್ಟ್ ಸರಣಿಗಳಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ 3 ಪಂದ್ಯಗಳಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು, 42 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಒಂದು ಸ್ಥಾನ ಕುಸಿತ ಕಂಡ ಭಾರತ
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಮೊದಲನೇಯ ಟೆಸ್ಟ್ ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದ ಭಾರತ ಇದೀಗ ಆಸ್ಟ್ರೇಲಿಯ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದ ಕಾರಣದಿಂದಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಎಲ್ಲಾ ತಂಡಗಳಿಗಿಂತ ಹೆಚ್ಚು ಅಂಕ ಪಡೆದಿದ್ದರೂ ಕೂಡ ಭಾರತಕ್ಕಿಲ್ಲ ಅಗ್ರಸ್ಥಾನ!
ಈ ಅಂಕ ಪಟ್ಟಿಯನ್ನು ಗಮನಿಸಿದರೆ ಉಳಿದ ಎಲ್ಲಾ ತಂಡಗಳಿಗಿಂತ ಭಾರತ ಹೆಚ್ಚು ಪಂದ್ಯಗಳಲ್ಲಿ ಗೆದ್ದು ಹೆಚ್ಚು ಅಂಕಗಳನ್ನು ಪಡೆದುಕೊಂಡಿದೆ. ಆದರೂ ಸಹ ಭಾರತ ಅಗ್ರಸ್ಥಾನವನ್ನು ಪಡೆದುಕೊಳ್ಳಲಾಗದೇ ನಾಲ್ಕನೇ ಸ್ಥಾನದಲ್ಲಿರುವುದಕ್ಕೆ ಕಾರಣ ಟೀಮ್ ಇಂಡಿಯಾ ಪಂದ್ಯವೊಂದರಲ್ಲಿ ಸೋತಿರುವುದು ಮತ್ತು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವುದು. ಹೀಗೆ ಭಾರತ ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳಿಗಿಂತ ಹೆಚ್ಚು ಪಂದ್ಯಗಳಲ್ಲಿ ಸೋತಿರುವುದರಿಂದ ಮತ್ತು ಡ್ರಾ ಮಾಡಿಕೊಂಡಿರುವುದರಿಂದ ಕಡಿಮೆ ಗೆಲುವಿನ ಶೇಕಡಾಂಶವನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೆಚ್ಚು ಪಂದ್ಯಗಳನ್ನು ಗೆದ್ದು ಹೆಚ್ಚು ಅಂಕಗಳನ್ನು ಪಡೆದುಕೊಂಡರೂ ಸಹ ಒಟ್ಟಾರೆ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಹೊರಬರುವ ಗೆಲುವಿನ ಶೇಕಡಾಂಶ ಅಂಕಪಟ್ಟಿಯ ಮೇಲೆ ಭಾರೀ ಪ್ರಭಾವವನ್ನು ಬೀರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications