WTC 2021-23: ಹೆಚ್ಚು ಅಂಕ ಪಡೆದಿದ್ದರೂ ಭಾರತಕ್ಕಿಲ್ಲ ಉತ್ತಮ ಸ್ಥಾನ, ಆಸ್ಟ್ರೇಲಿಯಾ ನಂಬರ್ 1!

ಇದೇ ವರ್ಷ ಇಂಗ್ಲೆಂಡ್ ನೆಲದಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಜಯ ಸಾಧಿಸುವುದರ ಮೂಲಕ ತನ್ನ ಚೊಚ್ಚಲ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಹೀಗೆ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ದ್ವಿತೀಯ ಆವೃತ್ತಿ ಆರಂಭವಾಗಿದ್ದು ಸದ್ಯ ಅಂಕಪಟ್ಟಿಯಲ್ಲಿ ಸಾಕಷ್ಟು ಏರಿಳಿತಗಳು ಆಗುತ್ತಿವೆ.
ಮೊದಲಿಗೆ ವೆಸ್ಟ್ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ಬೀಗುವುದರ ಮೂಲಕ ಅಗ್ರಸ್ಥಾನಕ್ಕೇರಿದ ಶ್ರೀಲಂಕಾ ಇಲ್ಲಿಯವರೆಗೂ ಸಹ ಅಂಕಪಟ್ಟಿಯಲ್ಲಿ ನಂಬರ್ ಒನ್ ಆಗಿಯೇ ಮುಂದುವರಿದಿತ್ತು. ಹೌದು, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸರಣಿ ಮುಗಿದ ನಂತರ ಹಲವಾರು ಟೆಸ್ಟ್ ಸರಣಿಗಳು ನಡೆದರೂ ಕೂಡ ಲಂಕಾ ಮಾತ್ರ ಅಗ್ರಸ್ಥಾನದಿಂದ ಕೆಳಗೆ ಇಳಿದಿರಲಿಲ್ಲ. ಆದರೆ ಇದೀಗ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಟೆಸ್ಟ್ ಸರಣಿಯ ತೃತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೌದು, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯ ತೃತೀಯ ಟೆಸ್ಟ್ ಪಂದ್ಯದ ಫಲಿತಾಂಶ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕಪಟ್ಟಿಯಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ನಿರ್ಮಿಸಿದೆ.

ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ
ಆಶಸ್ ಟೆಸ್ಟ್ ಸರಣಿ ಆರಂಭವಾಗುವುದಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯ ರೇಸ್‌ನಲ್ಲಿ ಆಸ್ಟ್ರೇಲಿಯಾ ಇರಲೇ ಇಲ್ಲ. ಕೇವಲ ಶ್ರೀಲಂಕಾ, ಪಾಕಿಸ್ತಾನ ಹಾಗೂ ಭಾರತ ತಂಡಗಳು ಟಾಪ್ 3 ಸ್ಥಾನಗಳನ್ನು ಪಡೆದುಕೊಂಡಿದ್ದವು. ಆದರೆ ಆಶಸ್ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗ ಮುಗಿದಿದ್ದು ಈ ಮೂರರಲ್ಲಿಯೂ ಕೂಡ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 35 ಅಂಕಗಳನ್ನು ಪಡೆದುಕೊಂಡಿರುವ ಆಸ್ಟ್ರೇಲಿಯಾ 100 ಗೆಲುವಿನ ಶೇಕಡಾಂಶವನ್ನು ಹೊಂದಿದೆ. ಮುಖ್ಯವಾಗಿ ಆಸ್ಟ್ರೇಲಿಯಾ ಯಾವುದೇ ಪೆನಾಲ್ಟಿ ಓವರ್ ಮಾಡಿಲ್ಲ, ಯಾವುದೇ ಪಂದ್ಯವನ್ನು ಸೋತಿಲ್ಲ ಮತ್ತು ಯಾವುದೇ ಪಂದ್ಯವನ್ನು ಕೂಡ ಡ್ರಾ ಮಾಡಿಕೊಂಡಿಲ್ಲ. ಹೀಗಾಗಿ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಸ್ಪಷ್ಟವಾಗಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಹಾಗೂ ಇದೇ ಸರಣಿಯಲ್ಲಿ ಇನ್ನೂ 2 ಪಂದ್ಯಗಳನ್ನು ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಆಡಲಿದ್ದು ಮುಂದಿನ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಿದರೆ ಆಸ್ಟ್ರೇಲಿಯಾ ಬಹು ದೊಡ್ಡ ಅಂತರದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಲಿದೆ.

ದ್ವಿತೀಯ ಸ್ಥಾನದಲ್ಲಿ ಲಂಕಾ, ತೃತೀಯ ಸ್ಥಾನದಲ್ಲಿ ಪಾಕ್
ಇದುವರೆಗೂ ಒಟ್ಟು 1 ಸರಣಿಯನ್ನು ಆಡಿರುವ ಶ್ರೀಲಂಕಾ ಆ ಸರಣಿಯ ಎಲ್ಲಾ 2 ಪಂದ್ಯಗಳಲ್ಲಿಯೂ ಜಯ ಗಳಿಸುವುದರ ಮೂಲಕ 24 ಅಂಕ ಮತ್ತು ಗೆಲುವಿನ ಶೇಕಡಾಂಶ 100ನ್ನು ಪಡೆದುಕೊಂಡಿದೆ. ಈ ಮೂಲಕ ಯಾವುದೇ ಡ್ರಾ, ಸೋಲು ಮತ್ತು ಪೆನಾಲ್ಟಿಗೆ ಒಳಗಾಗದೇ ಇರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಇದುವರೆಗೂ ಒಟ್ಟು 2 ಸರಣಿಗಳನ್ನು ಆಡಿರುವ ಪಾಕಿಸ್ತಾನ ಆ ಸರಣಿಗಳ ಪೈಕಿ 2 ಪಂದ್ಯಗಳಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು, 24 ಅಂಕಗಳನ್ನು ಪಡೆದುಕೊಂಡು, 66.6 ಗೆಲುವಿನ ಶೇಕಡಾಂಶದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

ನಾಲ್ಕನೇ ಸ್ಥಾನದಲ್ಲಿ ಟೀಮ್ ಇಂಡಿಯಾ
ಸದ್ಯ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ತಂಡಗಳಿಗಿಂತಲೂ ಹೆಚ್ಚಿನ ಪಂದ್ಯಗಳಲ್ಲಿ ಜಯ ಸಾಧಿಸಿದೆ ಮತ್ತು ಹೆಚ್ಚಿನ ಅಂಕಗಳನ್ನೂ ಕೂಡ ಪಡೆದುಕೊಂಡಿದೆ. ಆದರೂ ಸಹ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿಲ್ಲ, ಇದಕ್ಕೆ ಕಾರಣ ಗೆಲುವಿನ ಶೇಕಡಾಂಶ. ಸದ್ಯ ಪ್ರಥಮ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಯಾವುದೇ ಪಂದ್ಯಗಳಲ್ಲಿಯೂ ಸೋತಿಲ್ಲ ಹಾಗೂ ಡ್ರಾ ಮಾಡಿಕೊಂಡಿಲ್ಲ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ ಕೂಡ ಇದೇ ರೀತಿ ಇದೆ. ಆದರೆ ಟೀಮ್ ಇಂಡಿಯಾ 1 ಪಂದ್ಯದಲ್ಲಿ ಸೋತಿದೆ ಮತ್ತು 2 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಗೆಲುವಿನ ಶೇಕಡಾಂಶ ಕಡಿಮೆಯಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳಬೇಕೆಂದರೆ ಪಂದ್ಯಗಳಲ್ಲಿ ಸೋಲುವುದು ಮತ್ತು ಡ್ರಾ ಮಾಡಿಕೊಳ್ಳುವುದನ್ನು ಆದಷ್ಟು ತಡೆಯಲೇಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications