WTC 2021-23: ಸೆಂಚುರಿಯನ್ ಟೆಸ್ಟ್ ಗೆದ್ದ ನಂತರವೂ ಅಂಕಪಟ್ಟಿಯಲ್ಲಿ ಏರಿಕೆ ಕಾಣದ ಭಾರತ

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಮೊದಲಿಗೆ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದು ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಶುಭಾರಂಭ ಮಾಡಿದೆ. ಹೌದು, ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಡಿಸೆಂಬರ್ 26ರಂದು ಆರಂಭವಾಗಿದ್ದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 113 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿದೆ.
ಡಿಸೆಂಬರ್ 26ರಂದು ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆರಿಸಿಕೊಂಡರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ಉತ್ತಮ ಪ್ರದರ್ಶನದಿಂದ ಮೊದಲನೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿತು. ನಂತರ ಮೊದಲನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 10 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಹೀಗೆ ಟೀಮ್ ಇಂಡಿಯಾ 130 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 174 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 305 ರನ್‌ಗಳ ಗುರಿಯನ್ನು ನೀಡಿತ್ತು. ಹೀಗೆ ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನೆಟ್ಟಿದ ದಕ್ಷಿಣ ಆಫ್ರಿಕಾ 191 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಸೋಲುಂಡಿದೆ.
ಹೀಗೆ ಟೀಮ್ ಇಂಡಿಯಾ ದಾಖಲೆಯ ಗೆಲುವು ಸಾಧಿಸಿದರೂ ಸಹ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕಪಟ್ಟಿಯಲ್ಲಿ ಏರಿಕೆ ಕಂಡಿಲ್ಲ. ಈ ಪಂದ್ಯಕ್ಕೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಪಂದ್ಯ ಮುಗಿದ ನಂತರವೂ ನಾಲ್ಕನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಟೀಮ್ ಇಂಡಿಯಾದ ಈ ಗೆಲುವಿನ ನಂತರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕಪಟ್ಟಿ ಈ ಕೆಳಕಂಡಂತಿದೆ.

ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ
ಆಶಸ್ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಮುಗಿದಿದ್ದು ಈ ಮೂರರಲ್ಲಿಯೂ ಕೂಡ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 35 ಅಂಕಗಳನ್ನು ಪಡೆದುಕೊಂಡಿರುವ ಆಸ್ಟ್ರೇಲಿಯಾ 100 ಗೆಲುವಿನ ಶೇಕಡಾಂಶವನ್ನು ಹೊಂದಿದೆ. ಮುಖ್ಯವಾಗಿ ಆಸ್ಟ್ರೇಲಿಯಾ ಯಾವುದೇ ಪೆನಾಲ್ಟಿ ಓವರ್ ಮಾಡಿಲ್ಲ, ಯಾವುದೇ ಪಂದ್ಯವನ್ನು ಸೋತಿಲ್ಲ ಮತ್ತು ಯಾವುದೇ ಪಂದ್ಯವನ್ನು ಕೂಡ ಡ್ರಾ ಮಾಡಿಕೊಂಡಿಲ್ಲ. ಹೀಗಾಗಿ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಸ್ಪಷ್ಟವಾಗಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಹಾಗೂ ಇದೇ ಸರಣಿಯಲ್ಲಿ ಇನ್ನೂ 2 ಪಂದ್ಯಗಳನ್ನು ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಆಡಲಿದ್ದು ಮುಂದಿನ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಿದರೆ ಆಸ್ಟ್ರೇಲಿಯಾ ಬಹು ದೊಡ್ಡ ಅಂತರದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಲಿದೆ.

ದ್ವಿತೀಯ ಸ್ಥಾನದಲ್ಲಿ ಶ್ರೀಲಂಕಾ, ತೃತೀಯ ಸ್ಥಾನದಲ್ಲಿ ಪಾಕಿಸ್ತಾನ
ಇದುವರೆಗೂ ಒಟ್ಟು 1 ಸರಣಿಯನ್ನು ಆಡಿರುವ ಶ್ರೀಲಂಕಾ ಆ ಸರಣಿಯ ಎಲ್ಲಾ 2 ಪಂದ್ಯಗಳಲ್ಲಿಯೂ ಜಯ ಗಳಿಸುವುದರ ಮೂಲಕ 24 ಅಂಕ ಮತ್ತು ಗೆಲುವಿನ ಶೇಕಡಾಂಶ 100ನ್ನು ಪಡೆದುಕೊಂಡಿದೆ. ಈ ಮೂಲಕ ಯಾವುದೇ ಡ್ರಾ, ಸೋಲು ಮತ್ತು ಪೆನಾಲ್ಟಿಗೆ ಒಳಗಾಗದೇ ಇರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಇದುವರೆಗೂ ಒಟ್ಟು 2 ಸರಣಿಗಳನ್ನು ಆಡಿರುವ ಪಾಕಿಸ್ತಾನ ಆ ಸರಣಿಗಳ ಪೈಕಿ 2 ಪಂದ್ಯಗಳಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು, 24 ಅಂಕಗಳನ್ನು ಪಡೆದುಕೊಂಡು, 66.6 ಗೆಲುವಿನ ಶೇಕಡಾಂಶದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

ನಾಲ್ಕನೇ ಸ್ಥಾನದಲ್ಲಿಯೇ ಉಳಿದ ಟೀಮ್ ಇಂಡಿಯಾ
ದ.ಆಫ್ರಿಕಾ ವಿರುದ್ಧದ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸಿದ ನಂತರ ಸದ್ಯ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ತಂಡಗಳಿಗಿಂತಲೂ ಹೆಚ್ಚಿನ ಪಂದ್ಯಗಳಲ್ಲಿ ( 4 ) ಜಯ ಸಾಧಿಸಿದೆ ಮತ್ತು ಹೆಚ್ಚಿನ ಅಂಕಗಳನ್ನೂ ( 54 ) ಕೂಡ ಪಡೆದುಕೊಂಡಿದೆ. ಆದರೂ ಸಹ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿಲ್ಲ, ಇದಕ್ಕೆ ಕಾರಣ ಗೆಲುವಿನ ಶೇಕಡಾಂಶ. ಸದ್ಯ ಪ್ರಥಮ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಯಾವುದೇ ಪಂದ್ಯಗಳಲ್ಲಿಯೂ ಸೋತಿಲ್ಲ ಹಾಗೂ ಡ್ರಾ ಮಾಡಿಕೊಂಡಿಲ್ಲ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ ಕೂಡ ಇದೇ ರೀತಿ ಇದೆ. ಆದರೆ ಟೀಮ್ ಇಂಡಿಯಾ 1 ಪಂದ್ಯದಲ್ಲಿ ಸೋತಿದೆ ಮತ್ತು 2 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಗೆಲುವಿನ ಶೇಕಡಾಂಶ ಕಡಿಮೆಯಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications