
ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ನೂರು ಶತಕವನ್ನು ಬಾರಿಸಿ ಅಸಾಧಾರಣ ಸಾಧನೆಯನ್ನು ಮಾಡಿದ್ದಾರೆ. ಸಚಿನ್ ದಾಖಲಿಸಿದ ಪ್ರತೀ ಶತಕವೂ ಅಭಿಮಾನಿಗಳಿಗೆ ಸ್ಮರಣೀಯ. ಪ್ರತೀ ಶತಕಕ್ಕೂ ಅದರದ್ದೇ ಆದ ತೂಕವಿದೆ. ಇದೇ ವಿಚಾರವನ್ನು ಪಿಯೂಷ್ ಚಾವ್ಲಾ ಆಯ್ಕೆಗಾರರೊಂದಿಗಿನ ಸಂವಾದದಲ್ಲಿ ಎತ್ತಿದ್ದರಂತೆ.
ಟೀಮ್ ಇಂಡಿಯಾ ಮಾಜಿ ಆಟಗಾರ ಕಾಮೆಂಟೇಟರ್ ಆಕಾಶ್ ಚೋಪ್ರಾ ಅವರ ಜೊತೆಗೆ ನಡೆಸಿದ ಯುಟ್ಯೂಬ್ ಸಂದರ್ಶನದಲ್ಲಿ ಚಾವ್ಲಾ ವೃತ್ತಿ ಬದುಕಿನ ವಿಚಿತ್ರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಆಯ್ಕೆಗಾರರಲ್ಲಿ ಓರ್ವರು ಒಂದು ಬಾರಿ ಗೂಗ್ಲಿ ಮೂಲಕ ವಿಕೆಟ್ ಪಡೆಯುವ ಕಲೆಯನ್ನು ಟೀಕಿಸಿದ್ದರು ಎಂದು ತಿಳಿಸಿದ್ದಾರೆ.
ಆಯ್ಕೆಗಾರರ ಜೊತೆಗೆ ಒಂದು ಬಾರಿ ಮಾತನಾಡಿದ್ದೆ, ಆಗ ಅವರು ನಾನು ಗೂಗ್ಲಿ ಎಸೆತದಲ್ಲೇ ಹೆಚ್ಚಿನ ವಿಕೆಟ್ ಪಡೆಯುತ್ತೇನೆ ಎಂದು ಹೇಳಿದ್ದರು ಎಂದಿದ್ದಾರೆ. ಆಗ ನಾನು ಆ ಆಯ್ಕೆಗಾರರಲ್ಲಿ ಒಂದಷ್ಟು ವಿಚಾರಗಳನ್ನು ಮಾತಮಾಡಿದ್ದೆ. ಸಚಿನ್ ತೆಂಡೂಲ್ಕರ್ ಅವರ ಶತಕದಲ್ಲಿ 60ರನ್‌ಗಳು ಸ್ಟ್ರೈಟ್‌ಡ್ರೈವ್ ಮೂಲಕವೇ ಬಂದಿದ್ದರೆ ಆ ಶತಕಕ್ಕೆ ಮೌಲ್ಯವಿಲ್ಲವೇ ಎಂದು ಪ್ರಶ್ನಿಸಿದ್ದೆ ಎಂದಿದ್ದಾರೆ.
ನನ್ನ ಮಾತನ್ನು ಅವರು ಪರಿಗಣಿಸಿದಂತೆ ಅನಿಸಿಲ್ಲ. ಅಂತಿಮವಾಗಿ ವಿಕೆಟ್ ವಿಕೆಟ್ ಪಡೆಯುವುದೇ ಮುಖ್ಯವಾಗಿದೆ. ಆದರೆ ಆಯ್ಕೆಗಾರರ ಆ ರೀತಿಯ ಮನಸ್ಥಿತಿ ನಿಜಕ್ಕೂ ಬೇಸರವನ್ನು ಉಂಟುಮಾಡುತ್ತದೆ ಎಂದು ಪಿಯೂಷ್ ಚಾವ್ಲಾ ಹೇಳಿದ್ದಾರೆ.
31 ವರ್ಷದ ಸ್ಪಿನ್ನರ್ ಪಿಯೂಷ್ ಚಾವ್ಲಾ 2007 ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ಸದಸ್ಯರಾಗಿದ್ದರು. ಆದರೆ ಹೆಚ್ಚಿನ ಪಂದ್ಯಗಳಲ್ಲಿ ಪಿಯೂಷ್ ಆಡುವ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಅನುಭವಿ ಸ್ಪಿನ್ನರ್ ಹರ್ಭಜನ್ ಅವರು ಟೀಮ್ ಇಂಡಿಯಾದ ಮೊದಲ ಆಯ್ಕೆಯಾಗಿದ್ದರು.