ಪಾಕಿಸ್ತಾನದ ಆಲ್‌ರೌಂಡರ್ ಇಮಾದ್ ವಾಸಿಮ್ ಶುಕ್ರವಾರ ಎರಡನೇ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇಮಾದ್ ವಾಸಿಂ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಬಳಿಕ ತಂಡಕ್ಕೆ ಮರಳಿದ ಅವರು ಟಿ20 ವಿಶ್ವಕಪ್ ಆಡಿದ್ದರು. ಆದರೆ ಅವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಇಮಾದ್ ವಾಸಿಮ್ ದೇಶೀಯ ಮತ್ತು ವಿಶ್ವದಾದ್ಯಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳನ್ನು ಆಡುವ ಬಗ್ಗೆ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಇಮಾದ್ ವಾಸಿಮ್ 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇಮಾದ್ ವಾಸಿಮ್ ಅದ್ಭುತ ಪ್ರದರ್ಶನ ನೀಡಿದ್ದರು. ಇಸ್ಲಾಮಾಬಾದ್ ಯುನೈಟೆಡ್ ಪರ ಮೂರು ಪ್ಲೇ ಆಫ್ ಪಂದ್ಯಗಳಲ್ಲಿ ಇಮಾದ್ ವಾಸಿಮ್ 'ಪಂದ್ಯ ಶ್ರೇಷ್ಠ ಆಟಗಾರ' ಪ್ರಶಸ್ತಿ ಪಡೆದಿದ್ದರು. ಇದು ಮತ್ತೊಮ್ಮೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ದಾರಿ ಮಾಡಿಕೊಟ್ಟಿತ್ತು. ಇದೀಗ ಅವರು ಎರಡನೇ ಬಾರಿಗೆ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ಟಿ20 ವಿಶ್ವಕಪ್ 2024ರಲ್ಲಿ ಇಮಾದ್ ವಾಸಿಮ್ ಕೊನೆ ಬಾರಿಗೆ ಪಾಕಿಸ್ತಾನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಗುಂಪು ಹಂತದಲ್ಲಿ ಯುಎಸ್‌ಎ ಮತ್ತು ಭಾರತ ವಿರುದ್ಧ ಸೋತ ನಂತರ ಪಾಕಿಸ್ತಾನ ಟೂರ್ನಿಯಿಂದ ಹೊರಗುಳಿದಿತ್ತು. ಬಳಿಕ ಐರ್ಲೆಂಡ್ ವಿರುದ್ಧ ಇಮಾದ್ ವಾಸಿಮ್ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಾದ ನಂತರ ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದರು.
ಇಮಾದ್ ವಾಸಿಮ್ ಅವರು ತಮ್ಮ ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
'ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ವಿಶ್ವ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು ನನ್ನ ಜೀವನದ ದೊಡ್ಡ ಗೌರವವಾಗಿದೆ. ಹಸಿರು ಜರ್ಸಿಯನ್ನು ಧರಿಸುವುದು ಪ್ರತಿ ಕ್ಷಣವೂ ಅವಿಸ್ಮರಣೀಯವಾಗಿದೆ. ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಧನ್ಯವಾದಗಳು ಎಂದಿದ್ದಾರೆ.
ಇಮಾದ್ ವಾಸಿಮ್ 2015ರಲ್ಲಿ ಲಾಹೋರ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಪಾಕಿಸ್ತಾನ ಪರ ಇದುವರೆಗೆ ಅವರು 75 ಟಿ20 ಮತ್ತು 55 ಏಕದಿನ ಪಂದ್ಯಗಳನ್ನು ಆಡಿದ್ದು, ಒಟ್ಟು 1540 ರನ್ ಗಳಿಸಿದ್ದಾರೆ. ಇಮಾದ್ ವಾಸಿಮ್ ಏಕದಿನ ಪಂದ್ಯಗಳಲ್ಲಿ 117 ವಿಕೆಟ್‌ಗಳನ್ನು ಪಡೆದಿದ್ದಾರೆ.