ಮೊಹಾಲಿಯಲ್ಲಿ ಮೊದಲ ಟಿ20 ಪಂದ್ಯ ಗೆದ್ದ ನಂತರ, ಟೀಮ್ ಇಂಡಿಯಾ ಭಾನುವಾರ, ಜನವರಿ 14ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುವ ಮೂಲಕ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಿದೆ.
ತಮ್ಮ ಮಗಳು ವಾಮಿಕಾ ಅವರ ಜನ್ಮದಿನದ ವೈಯಕ್ತಿಕ ಕಾರಣಗಳಿಂದಾಗಿ ಮೊದಲನೇ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಪುನರಾಗಮನವು ಭಾರತ ತಂಡವನ್ನು ಇನ್ನಷ್ಟು ಬಲಪಡಿಸಲಿದೆ. ವಿರಾಟ್ ಕೊಹ್ಲಿ ಶನಿವಾರದಂದು ಮುಂಬೈನಿಂದ ಇಂದೋರ್‌ಗೆ ವಿಮಾನ ಏರಿದರು ಮತ್ತು ಶೀಘ್ರದಲ್ಲೇ ಪಂದ್ಯಕ್ಕೂ ಮುನ್ನ ನೆಟ್‌ನಲ್ಲಿ ಅಭ್ಯಾಸ ಮಾಡಲಿದ್ದಾರೆ.

ಭಾರತ ತಂಡದ ಆಡುವ 11ರ ಬಳಗದಲ್ಲಿ ವಿರಾಟ್ ಕೊಹ್ಲಿ ಯಾರ ಬದಲಿಗೆ ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ವಿರಾಟ್ ಕೊಹ್ಲಿಗೆ ದಾರಿ ಮಾಡಿಕೊಡುವ ಆಟಗಾರನೆಂದರೆ ತಿಲಕ್ ವರ್ಮಾ.
ಇನ್ನು ಯಶಸ್ವಿ ಜೈಸ್ವಾಲ್ ಅವರು 2ನೇ ಟಿ20 ಪಂದ್ಯಕ್ಕೆ ಆಡುವ 11ರಲ್ಲಿ ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಹೀಗಾದಲ್ಲಿ ರನ್‌ಗಳಿಗಾಗಿ ಹೆಣಗಾಡುತ್ತಿರುವ ಶುಭ್ಮನ್ ಗಿಲ್ ಹೊರಗುಳಿಯಬಹುದು. ಶುಭ್ಮನ್ ಗಿಲ್ ಮತ್ತು ತಿಲಕ್ ವರ್ಮಾ ಅವರು ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.
ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರು ಉಳಿಯಲಿದ್ದಾರೆ. ಆದರೆ, ರೋಹಿತ್ ಶರ್ಮಾ ಆಡುವ 11ರ ಬಳಗಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲು ಇಷ್ಟಪಡುವ ನಾಯಕನಲ್ಲ. ಇಂದೋರ್ ಪಂದ್ಯವನ್ನು ಭಾರತ ಗೆದ್ದರೆ, ಬೆಂಚ್ ಕಾಯಿಸುತ್ತಿರುವ ಆಟಗಾರರು ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಅವಕಾಶ ಪಡೆಯಬಹುದು.

ರಶೀದ್ ಖಾನ್ ಅವರು ಇನ್ನೂ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಕಾರಣ, ಅಫ್ಘಾನಿಸ್ತಾನ ತಂಡವು ಟಿ20 ಪಂದ್ಯಗಳಲ್ಲಿ ಅವರ ಸೇವೆಯನ್ನು ಕಳೆದುಕೊಳ್ಳುವುದನ್ನು ಮುಂದುವರಿಸಲಿದೆ. ಆದಾಗ್ಯೂ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅಫ್ಘಾನಿಸ್ತಾನ ತಂಡದೊಂದಿಗೆ ಇರುವುದರಿಂದ ಚೇತರಿಕೆಯತ್ತ ಗಮನ ಹರಿಸುತ್ತಿದ್ದಾರೆ.
ಇನ್ನು ಆಡುವ 11ರ ಬಳಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲು ಅಫ್ಘಾನಿಸ್ತಾನ ತಂಡ ಯೋಚಿಸುತ್ತಿಲ್ಲ. ಮೊದಲ ಪಂದ್ಯವಾಡಿದ ತಂಡದೊಂದಿಗೆ 2ನೇ ಟಿ20 ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಾರೆ, ಭಾರತದಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರನ್ನು ಬೆಂಬಲಿಸುತ್ತಾರೆ.
ಹೋಳ್ಕರ್ ಪಿಚ್ ವರದಿ
ಇದೇ ವೇಳೆ ಪಿಚ್‌ಗೆ ಸಂಬಂಧಿಸಿದಂತೆ, ಹೋಳ್ಕರ್ ಸ್ಟೇಡಿಯಂ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಸ್ವರ್ಗವಾಗಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ಕೇವಲ 43 ಎಸೆತಗಳಲ್ಲಿ 118 ರನ್ ಬಾರಿಸಿದಾಗ ಭಾರತ ತಂಡವು 5 ವಿಕೆಟ್‌ಗೆ 260 ರನ್ ಗಳಿಸಿತು.
ಇದು ಈ ಮೈದಾನದಲ್ಲಿ ತಂಡದ ಗರಿಷ್ಠ ಸ್ಕೋರ್ ಕೂಡ ಆಗಿದೆ. 2022ರಲ್ಲಿ ಭಾರತ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 227 ರನ್ ಗಳಿಸಿದಾಗ ಟಿ20 ಪಂದ್ಯಗಳಲ್ಲಿ ಈ ಸ್ಥಳದಲ್ಲಿ ಎರಡನೇ ಅತ್ಯಧಿಕ ಮೊತ್ತವನ್ನು ಕಲೆಹಾಕಿತ್ತು.
ಇಂದೋರ್‌ನಲ್ಲಿ ಭಾನುವಾರದಂದು 25 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಆಹ್ಲಾದಕರ ದಿನವಾಗಿರುತ್ತದೆ ಮತ್ತು ಮಧ್ಯಪ್ರದೇಶದ ವ್ಯಾಪಾರ ರಾಜಧಾನಿಯಲ್ಲಿ ಪ್ರಖರ ಬಿಸಿಲಿನೊಂದಿಗೆ ಮಂಜಿನ ಯಾವುದೇ ಲಕ್ಷಣಗಳಿಲ್ಲ ಎಂದು ಅಕ್ಯುವೆದರ್ ಅಪ್ಲಿಕೇಶನ್ ಹೇಳುತ್ತದೆ.
ಭಾರತ vs ಅಫ್ಘಾನಿಸ್ತಾನ 2ನೇ ಟಿ20 ಪಂದ್ಯದ ಸಂಭಾವ್ಯ ಆಡುವ 11ರ ಬಳಗ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್, ಮುಖೇಶ್ ಕುಮಾರ್.
ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್ (ನಾಯಕ), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್-ಉರ್-ರಹಮಾನ್.