ಗುರುವಾರ, ಜನವರಿ 11ರಂದು ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಪ್ರವಾಸಿ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಈ ಟಿ20 ಸರಣಿಯಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕಲು ನಮ್ಮ ತಂಡವು ಸಜ್ಜಾಗಿದೆ ಎಂದು ಅಫ್ಘಾನಿಸ್ತಾನ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಹೇಳಿದರು.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 14 ತಿಂಗಳುಗಳ ದೀರ್ಘ ವಿರಾಮದ ನಂತರ, ಟಿ20 ಕ್ರಿಕೆಟ್‌ಗೆ ಮರಳುತ್ತಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಇಬ್ಬರು ಕೊನೆಯದಾಗಿ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡರು. ಈ ನಡುವೆ ಐಪಿಎಲ್‌ನಲ್ಲಿ ಮಾತ್ರ ಟಿ20 ಕ್ರಿಕೆಟ್ ಆಡಿದ್ದಾರೆ.
ಅಫ್ಘಾನಿಸ್ತಾನ ತಂಡವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗಾಗಿ ಯೋಜನೆಗಳನ್ನು ಹೊಂದಿದೆ ಎಂದು ಸರಣಿಯ ಅಧಿಕೃತ ಪ್ರಸಾರಕರಾದ ಜಿಯೋಸಿನಿಮಾ ಜೊತೆಗೆ ಮಾತನಾಡುತ್ತಾ ಜೊನಾಥನ್ ಟ್ರಾಟ್ ತಿಳಿಸಿದರು.
"ರೋಹಿತ್ ಮತ್ತು ವಿರಾಟ್ ಕ್ರಿಕೆಟ್‌ನ ಎರಡು ದೊಡ್ಡ ಹೆಸರುಗಳು. ಆದರೆ ತಮ್ಮ ತಂಡವು ಅವರಿಗಾಗಿ ಯೋಜನೆಗಳನ್ನು ಹೊಂದಿದೆ ಮತ್ತು ಆ ದಿನ ನಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಲು ಎದುರು ನೋಡುತ್ತೇವೆ," ಎಂದು ಅಫ್ಘಾನಿಸ್ತಾನ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಅಭಿಪ್ರಾಯಪಟ್ಟರು.

"ಭಾರತ ಆಯ್ಕೆ ಮಾಡುವ ಯಾವುದೇ ತಂಡವು ಪ್ರಬಲವಾಗಿದೆ. ಅದಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹವರನ್ನು ಸೇರಿಸಿದ್ದಾರೆ ಮತ್ತು ಅವರು ವಿಶ್ವ ದರ್ಜೆಯ ಆಟಗಾರರಾಗಿದ್ದಾರೆ. ಐಪಿಎಲ್‌ನಲ್ಲಿ ಅವರ ವಿರುದ್ಧ ಸಾಕಷ್ಟು ಕ್ರಿಕೆಟ್ ಆಡಿದ ಆಟಗಾರರನ್ನು ಹೊಂದಿರುವ ನಾವು ಹೆಚ್ಚು ಅದೃಷ್ಟಶಾಲಿಯಾಗಿದ್ದೇವೆ".
"ಕೆಲವು ಅಫ್ಘಾನಿಸ್ತಾನ ಆಟಗಾರರು ಭಾರತೀಯ ಶ್ರೇಷ್ಠರ ಆಟವನ್ನು ಟಿವಿಯಲ್ಲಿ ವೀಕ್ಷಿಸಿದ್ದಾರೆ. ಆದ್ದರಿಂದ ಅವರಿಗೆ ಕೆಲವು ಯೋಜನೆಗಳು ಖಂಡಿತವಾಗಿಯೂ ಇರುತ್ತವೆ. ಇದು ಆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮತ್ತು ಆ ದಿನ ನಾವು ಅದನ್ನು ಮಾಡಲು ಸಿದ್ಧರಿದ್ದೇವೆ," ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಜೊನಾಥನ್ ಟ್ರಾಟ್ ಹೇಳಿದರು.
ಭಾರತ ತಂಡದ ವಿರುದ್ಧ ಸರಣಿಯನ್ನು ಗೆಲ್ಲಬೇಕಾದರೆ, ಯಾವುದೇ ಎದುರಾಳಿ ತಂಡವು ಆಟದ ಎಲ್ಲಾ ಮೂರು ಅಂಶಗಳಲ್ಲಿ ಉತ್ತಮವಾಗಿರಬೇಕು ಎಂದು ಅಫ್ಘಾನಿಸ್ತಾನ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಸಲಹೆ ನೀಡಿದರು.
"ನಾವು ಒತ್ತಡದಲ್ಲಿ ಆ ಪ್ರಮುಖ ಕ್ಷಣಗಳನ್ನು ಗೆಲ್ಲಬೇಕಾಗಿದೆ. ಇಂದಿನ ಅಭ್ಯಾಸವು ಅದರ ಬಗ್ಗೆಯೇ ಇದೆ, ಆದ್ದರಿಂದ ಆಟಗಾರರು ಆಟದಲ್ಲಿ ಪ್ರಭಾವ ಬೀರಲು ಅವಕಾಶ ಸಿಕ್ಕಾಗಲೆಲ್ಲಾ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ," ಎಂದು ಟ್ರಾಟ್ ಹೇಳಿದರು.
ಅಫ್ಘಾನಿಸ್ತಾನ ತಂಡದ ಆಯ್ಕೆಯ ಮೇಲೆ ರಶೀದ್ ಖಾನ್ ಅನುಪಸ್ಥಿತಿಯ ಪ್ರಭಾವದ ಬಗ್ಗೆ ಜೊನಾಥನ್ ಟ್ರಾಟ್ ಪ್ರತಿಕ್ರಿಯಿಸಿ, ತಂಡವು ರಶೀದ್ ಖಾನ್ ಅವರ ನಾಯಕತ್ವ ಮತ್ತು ಕೊಡುಗೆಗಳನ್ನು ಕಳೆದುಕೊಳ್ಳಲಿದೆ. ಇದು ಇತರ ಆಟಗಾರರಿಗೆ ಆಡಲು ಅವಕಾಶ ಒದಗಿಸುತ್ತದೆ ಎಂದರು.