ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ತಮ್ಮ ತವರೂರು ದೆಹಲಿಗೆ ಹಿಂದಿರುಗಿದ ನಂತರ, ಸದ್ಯ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡನೇ ಅರ್ಧಶತಕವನ್ನು ಬಾರಿಸಿದರು.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ, ಅಕ್ಟೋಬರ್ 11ರಂದು ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಲು ಬ್ಯಾಟಿಂಗ್‌ನಲ್ಲಿ ಮಾರ್ಗದರ್ಶನ ಮಾಡಿದರು.

ದೆಹಲಿಯಲ್ಲಿ ಅಫ್ಘಾನಿಸ್ತಾನ ನೀಡಿದ್ದ 273 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 15 ಓವರ್‌ಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು ಮತ್ತು ವಿರಾಟ್ ಕೊಹ್ಲಿ 55 ರನ್ ಗಳಿಸಿ ಅಜೇಯರಾಗುಳಿದರು.
2023ರ ವಿಶ್ವಕಪ್‌ನ ಭಾರತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ 85 ರನ್‌ಗಳ ಇನ್ನಿಂಗ್ಸ್‌ನ ನಂತರ, ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಮತ್ತೊಂದು ತಾಳ್ಮೆಯ ಅರ್ಧಶತಕ ಬಾರಿಸಿ ಪಂದ್ಯಾವಳಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಮುಂದುವರೆಸಿದರು.
ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಭಾರತದ ಆರಂಭಿಕ ಪಂದ್ಯದಲ್ಲಿ 200 ರನ್‌ಗಳ ಕಷ್ಟಕರವಾದ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅವರು ಅದ್ಭುತ 85 ರನ್ ಗಳಿಸುವ ಮೂಲಕ, ಕೆಎಲ್ ರಾಹುಲ್ ಜೊತೆಗಿನ 165 ರನ್‌ಗಳ ಜೊತೆಯಾಟವು ಗೆಲುವಿಗೆ ಸಹಾಯ ಮಾಡಿತು.

ವಿರಾಟ್ ಕೊಹ್ಲಿ ತಮ್ಮ 282 ಪಂದ್ಯಗಳ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ದೆಹಲಿಯ ತವರಿನಂಗಳದಲ್ಲಿ 7 ಏಕದಿನ ಪಂದ್ಯಗಳನ್ನು ಆಡಿದ್ದರು. 2009ರಲ್ಲಿ ಶ್ರೀಲಂಕಾ ವಿರುದ್ಧ ಯಾವುದೇ ಫಲಿತಾಂಶವಿಲ್ಲದ ರದ್ದಾಗಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
2011ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಎರಡನೇ ಏಕದಿನ ಪಂದ್ಯವನ್ನು ದೆಹಲಿಯಲ್ಲಿ ಆಡಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 12 ರನ್ ಗಳಿಸಿ ಔಟಾದರು. ಆದರೆ ಭಾರತ ಅಂತಿಮವಾಗಿ 190 ರನ್‌ಗಳ ಚೇಸ್‌ನಲ್ಲಿ ಐದು ವಿಕೆಟ್‌ಗಳಿಂದ ಗೆದ್ದಿತು.
ಅಕ್ಟೋಬರ್ 2011ರಲ್ಲಿ ಇಂಗ್ಲೆಂಡ್ ವಿರುದ್ಧ 98 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದಾಗ ವಿರಾಟ್ ಕೊಹ್ಲಿ ತಮ್ಮ ತವರಿನಂಗಳದಲ್ಲಿ ಮೆರೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಭಾರತ ಎಂಟು ವಿಕೆಟ್‌ಗಳಿಂದ ಗೆದ್ದಿತು ಮತ್ತು ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಇದೇ ಅರುಣ್ ಜೇಟ್ಲಿ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 62 ರನ್ ಗಳಿಸಿದ ನಂತರದ ನಾಲ್ಕು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ಫಿಫ್ಟಿ ಪ್ಲಸ್ ಸ್ಕೋರ್ ಮಾಡಿದ್ದಾರೆ.
2019ರಲ್ಲಿ ದೆಹಲಿಯಲ್ಲಿ ನಡೆದ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಕೇವಲ 20 ರನ್ ಗಳಿಸಿ ಔಟಾದರು.
ಇದೀಗ ತನ್ನ ತವರು ಮೈದಾನಕ್ಕೆ ಮರಳಿದ ವಿರಾಟ್ ಕೊಹ್ಲಿ ಅವರು ಅಜೇಯ 55 ರನ್ ಗಳಿಸಿ ತಮ್ಮ 68ನೇ ಏಕದಿನ ಅರ್ಧಶತಕವನ್ನು ದಾಖಲಿಸುವ ಮೂಲಕ ಮತ್ತೊಮ್ಮೆ ಛಾಪು ಮೂಡಿಸಿದರು.
273 ರನ್‌ಗಳ ಸವಾಲಿನ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡ ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಮತ್ತು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಕೇವಲ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ನಿರ್ಮಿಸಿತು.
ಇಶಾನ್ ಕಿಶನ್ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 47 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ ಕೇವಲ 84 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಮೇತ 131 ರನ್ ಬಾರಿಸಿದರು.
ಇನ್ನು ಕಳೆದ ಪಂದ್ಯದ ಹೀರೋ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ 56 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ ಅಜೇಯ 55 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 23 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಅಜೇಯ 25 ರನ್ ಗಳಿಸಿದರು.