IND vs AUS 1st Test: ರವೀಂದ್ರ ಜಡೇಜಾ ತನ್ನ ಬೆರಳಿಗೆ ಸವರಿಕೊಂಡ ವಿವಾದ; ಐಸಿಸಿಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮ

ಗುರುವಾರ, ಫೆಬ್ರವರಿ 9ರಿಂದ ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಂದು ಪ್ರವಾಸಿ ತಂಡದ ವಿರುದ್ಧ ಆತಿಥೇಯ ತಂಡ ಪ್ರಾಬಲ್ಯ ಸಾಧಿಸಿದೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಅತ್ಯುತ್ತಮವಾಗಿ ಪುನರಾಗಮನ ಮಾಡಿದರು.
ಪಂದ್ಯದ ವೇಳೆ ರವೀಂದ್ರ ಜಡೇಜಾ ತಮ್ಮ ಎಡಗೈನ ತೋರು ಬೆರಳಿಗೆ ಏನೋ ಸವರಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ, ಆಸ್ಟ್ರೇಲಿಯಾದ ಮಾಧ್ಯವೊಂದು ವಿವಾದ ಉಂಟು ಮಾಡಿತ್ತು.
ನಾಗ್ಪುರ ಟೆಸ್ಟ್‌ನ ಮೊದಲ ದಿನದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕುಗಳಲ್ಲಿ ರವೀಂದ್ರ ಜಡೇಜಾ ಸ್ಪಿನ್ ಮಾಡುವ ತೋರು ಬೆರಳಿಗೆ ನೋವು ನಿವಾರಕ ಕ್ರೀಮ್ ಬಳಸುತ್ತಿದ್ದಾರೆ ಎಂದು ಭಾರತ ತಂಡದ ಮ್ಯಾನೇಜ್‌ಮೆಂಟ್ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಮಾಹಿತಿ ನೀಡಿದೆ.

ವೈರಲ್ ಆದ ವಿಡಿಯೋದಲ್ಲಿ ರವೀಂದ್ರ ಜಡೇಜಾ ಅವರು ಮೊಹಮ್ಮದ್ ಸಿರಾಜ್‌ನ ಅಂಗೈಯ ಹಿಂಭಾಗದಿಂದ ವಸ್ತುವನ್ನು ತೆಗೆದುಕೊಂಡರು ಮತ್ತು ಅದನ್ನು ಅವರ ಎಡಗೈಯ ತೋರು ಬೆರಳಿಗೆ ಸವರಿಕೊಂಡಿರುವುದು ಕಂಡುಬಂದಿದೆ.
ಆದರೆ, ರವೀಂದ್ರ ಜಡೇಜಾ ಅವರು ಚೆಂಡಿನ ಮೇಲೆ ಯಾವುದನ್ನು ಸವರುವುದು ಕಂಡುಬಂದಿಲ್ಲ. ಆದರೂ ಆ ಸಮಯದಲ್ಲಿ ಅವರ ಕೈಯಲ್ಲಿ ಬಾಲ್ ಇತ್ತು. ಚೆಂಡನ್ನು ಹೊಳಪಿಸಲು ಲಾಲಾರಸ ಸೇರಿದಂತೆ, ಯಾವುದೇ ವಸ್ತುವಿನ ಬಳಕೆಯನ್ನು ಐಸಿಸಿ ನಿರ್ಬಂಧಿಸಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವೆಬ್‌ಸೈಟ್‌ನ ಪ್ರಕಾರ, ಮೊದಲ ದಿನದ ಆಟ ಮುಗಿದ ತಕ್ಷಣ ರವೀಂದ್ರ ಜಡೇಜಾ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜರ್ ತೆರಳಿ ಘಟನೆಯ ಬಗ್ಗೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಮಾಹಿತಿ ನೀಡಿದ್ದಾರೆ. ಕೈಬೆರಳಿಗೆ ನೋವು ನಿವಾರಕ ಕ್ರೀಮ್ ಸವರಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ವಿರುದ್ಧ ಘಟನೆಗೆ ಸಂಬಂಧಿಸಿದಂತೆ ಯಾವುದೇ ಆರೋಪ ಹೊರಿಸಲಾಗಿಲ್ಲ.

ಇದೇ ವೇಳೆ, ಪಂದ್ಯದ ವೇಳೆ ನಡೆದ ಈ ಘಟನೆ ಬಗ್ಗೆ ಆಸ್ಟ್ರೇಲಿಯಾ ತಂಡವೂ ಸಹ ಮ್ಯಾಚ್ ರೆಫರಿಯ ಗಮನಕ್ಕೆ ತಂದಿರಲಿಲ್ಲ. ಆಟದ ನಿಯಮದ ಪ್ರಕಾರ, ಮ್ಯಾಚ್ ರೆಫರಿ ಅಂತಹ ಘಟನೆಗಳ ಬಗ್ಗೆ ದೂರು ನೀಡುವ ಅಗತ್ಯವಿಲ್ಲದೆ ಸ್ವತಂತ್ರವಾಗಿ ತನಿಖೆ ಮಾಡಬಹುದಾಗಿದೆ.
ಕ್ರಿಕೆಟ್ ಕಾನೂನಿನ ಪ್ರಕಾರ, ಬೌಲರ್ ಯಾವುದೇ ರೀತಿಯ ವಸ್ತುವನ್ನು ತಮ್ಮ ಕೈಗಳ ಮೇಲೆ ಹಚ್ಚಿಕೊಳ್ಳುವುದು ಅಥವಾ ಸವರಿಕೊಳ್ಳುವ ಮುನ್ನ ಅಂಪೈರ್‌ಗಳ ಅನುಮತಿ ಪಡೆಯುವ ಅಗತ್ಯವಿದೆ.
IND vs AUS 1st Test: ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಂತೆ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್!
ಪ್ರವಾಸಿ ಆಸ್ಟ್ರೇಲಿಯಾ ತಂಡದ ಭಾಗವಾಗಿರುವ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿನ ತಮ್ಮ ಪಾತ್ರಕ್ಕಾಗಿ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಷೇಧವನ್ನು ಅನುಭವಿಸಿದ್ದಾರೆ.
ಭಾರತ vs ಆಸ್ಟ್ರೇಲಿಯಾ ಮೊದಲ ದಿನದ ವಿವರ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಭಾರತದ ಬೌಲರ್‌ಗಳು 177 ರನ್‌ಗಳಿಗೆ ಆಲೌಟ್ ಮಾಡಿದರು. ರವೀಂದ್ರ ಜಡೇಜಾ 22 ಓವರ್‌ಗಳಲ್ಲಿ 47 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಇದು ಅವರ 11ನೇ ಐದು ವಿಕೆಟ್ ಗೊಂಚಲಾಗಿದೆ.
ಇದೇ ವೇಳೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 15.5 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 450 ವಿಕೆಟ್‌ಗಳನ್ನು ಪೂರೈಸಿದರು.
177 ರನ್‌ಗಳಿಗೆ ಪ್ರತ್ಯುತ್ತರವಾಗಿ, ಭಾರತ ತಂಡ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 56 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರೆ, ರವಿಚಂದ್ರನ್ ಅಶ್ವಿನ್ 5 ರನ್ ಗಳಿಸಿ ಇನ್ನೂ ಕ್ರೀಸ್‌ನಲ್ಲಿದ್ದಾರೆ. ಮೊದಲ ಇನ್ನಿಂಗ್ಸ್ ಮುನ್ನಡೆಗೆ ಆತಿಥೇಯ ತಂಡ ಇನ್ನೂ 100 ರನ್ ಗಳಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications