IND vs AUS 1st Test: ನಾಗ್ಪುರ ಟೆಸ್ಟ್ ಶತಕದ ನಂತರ ಹಲವು ದಾಖಲೆಗಳ ಪಟ್ಟಿಗೆ ಸೇರಿದ ರೋಹಿತ್ ಶರ್ಮಾ

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅದ್ಭುತ ಫಾರ್ಮ್ ಕಂಡುಕೊಂಡರು ಮತ್ತು ಅಮೋಘ ಶತಕ ಬಾರಿಸಿದರು.
ಪ್ರವಾಸಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ಗಳಿಗೆ ಸರ್ವಪತನ ಕಂಡ ನಂತರ, ಪ್ರತ್ಯುತ್ತರವಾಗಿ ಭಾರತ ತಂಡ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್‌ಗೆ 321 ರನ್ ಕಲೆ ಹಾಕಿದ್ದು, ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯರು 144 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ.
ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಮುರಿಯದ 8ನೇ ವಿಕೆಟ್ ಜೊತೆಯಾಟಕ್ಕೆ 81 ರನ್ ಕಲೆಹಾಕಿದ್ದು, ಜಡೇಜಾ 170 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 66 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ಅಕ್ಷರ್ ಪಟೇಲ್ 102 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಮೊದಲ ದಿನದಿಂದಲೇ ಭಾರತದ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಆಟಕ್ಕೆ ಮೊರೆಹೋಗಿದ್ದರು ಮತ್ತು ಮೊದಲ ದಿನದ ಮುಕ್ತಾಯಕ್ಕೂ ಮುನ್ನ ಅರ್ಧಶತಕ ಬಾರಿಸಿ ದೊಡ್ಡ ಇನ್ನಿಂಗ್ಸ್‌ನ ಸುಳಿವು ನೀಡಿದ್ದರು.

15 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 120 ರನ್
2ನೇ ದಿನದಂದು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 171 ಎಸೆತಗಳಲ್ಲಿ ತಮ್ಮ 9ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮುನ್ನ ಭಾರತ ತಂಡದ ನಾಯಕ 212 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ 120 ರನ್ ಬಾರಿಸಿದರು.
ರೋಹಿತ್ ಶರ್ಮಾ ತಮ್ಮ ಅತ್ಯುತ್ತಮ ಶತಕದ ಮೂಲಕ ಕೆಲವು ದಾಖಲೆಗಳ ಪಟ್ಟಿಗೆ ಸೇರಿದರು. ಆ ದಾಖಲೆಗಳ ಪಟ್ಟಿ ಇಲ್ಲಿದೆ.
ರೋಹಿತ್ ಶರ್ಮಾ ಮಾಡಿದ ನಮೂದುಗಳ ಪಟ್ಟಿ ಇಲ್ಲಿದೆ.

ಎಲ್ಲಾ ಸ್ವರೂಪದಲ್ಲಿ ಶತಕ ಬಾರಿಸಿದ ಭಾರತದ ಮೊದಲ ನಾಯಕ
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) ನಾಯಕನಾಗಿ ಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ತಿಲಕರತ್ನೆ ದಿಲ್ಶಾನ್, ಫಾಫ್ ಡು ಪ್ಲೆಸಿಸ್ ಮತ್ತು ಬಾಬರ್ ಅಜಂ ನಂತರ ವಿಶ್ವ ಪುರುಷರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ನಾಯಕರೆನಿಸಿಕೊಂಡರು.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶತಕ ಗಳಿಸಿದ 7ನೇ ಭಾರತೀಯ ನಾಯಕ
ರೋಹಿತ್ ಶರ್ಮಾ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶತಕ ಗಳಿಸಿದ 7ನೇ ಭಾರತೀಯ ನಾಯಕ ಎಂಬ ದಾಖಲೆ ಬರೆದು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ಅಜಿಂಕ್ಯ ರಹಾನೆ ಶತಕ ಬಾರಿಸಿದ ಪಟ್ಟಿಯಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ 14ನೇ ಭಾರತೀಯ ಆರಂಭಿಕ
ರೋಹಿತ್ ಶರ್ಮಾ ಅವರು ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ 14ನೇ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿದರು.
ಇದಕ್ಕೂ ಮುನ್ನ ಸುನಿಲ್ ಗವಾಸ್ಕರ್, ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿನೂ ಮಂಕಡ್, ನಾರಿ ಕಂಟ್ರಾಕ್ಟರ್, ಶಿಖರ್ ಧವನ್, ವಿವಿಎಸ್ ಲಕ್ಷ್ಮಣ್, ನಯನ್ ಮೊಂಗಿಯಾ, ಕೆಎಲ್ ರಾಹುಲ್, ರವಿಶಾಸ್ತ್ರಿ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಆರಂಭಿಕರಾಗಿ ಶತಕ ಬಾರಿಸಿದ ಪಟ್ಟಿಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications