IND vs AUS 1st Test: ಭಾರತದ ಆಡುವ 11ರ ಬಳಗದಲ್ಲಿ ಚೇತೇಶ್ವರ ಬದಲಿಗೆ ಸೂರ್ಯನನ್ನು ಆಯ್ಕೆ ಮಾಡಿ ಟೀಕೆಗೆ ಗುರಿಯಾದ ಜೋಶಿ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ, ಫೆಬ್ರವರಿ 9ರಿಂದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದ ನಂತರ ಭಾರತ ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಡಲಿದೆ.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ಚೇತೇಶ್ವರ ಪೂಜಾರ ಭಾರತ ತಂಡದ ಆಧಾರಸ್ತಂಭ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುತ್ತಾರೆ. ಅಗ್ರಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟು ತಂಡ ಸಂಕಷ್ಟದಲ್ಲಿದ್ದಾಗ ನೆಲಕಚ್ಚಿ ಆಡುವ ಮೂಲಕ ಭಾರತಕ್ಕೆ ಆಸರೆಯಾಗಿರುತ್ತಾರೆ.
ಆಸ್ಟ್ರೇಲಿಯಾ ವಿರುದ್ಧ 2,000 ಟೆಸ್ಟ್ ರನ್ ಪೂರ್ಣಗೊಳಿಸಲು ಕೇವಲ 107 ರನ್ ಅಗತ್ಯವಿರುವ ಭಾರತದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ, 2ನೇ ಪಂದ್ಯದಲ್ಲಿ 100ನೇ ಟೆಸ್ಟ್ ಪಂದ್ಯವನ್ನು ಆಡಿದ ಹೆಗ್ಗುರುತು ಸ್ಥಾಪಿಸಲು ಎದುರು ನೋಡುತ್ತಿದ್ದಾರೆ.
98 ಟೆಸ್ಟ್‌ಗಳಲ್ಲಿ ಚೇತೇಶ್ವರ ಪೂಜಾರ ಇಲ್ಲಿಯವರೆಗೆ 19 ಶತಕ ಮತ್ತು 34 ಅರ್ಧಶತಕಗಳೊಂದಿಗೆ 44.39 ಸರಾಸರಿಯಲ್ಲಿ 7,014 ರನ್ ಗಳಿಸಿದ್ದಾರೆ.
ಇದೇ ವೇಳೆ, ಭಾರತ ತಂಡದ ಮಾಜಿ ಸ್ಪಿನ್ನರ್ ಮತ್ತು ಬಿಸಿಸಿಐ ಮಾಜಿ ಆಯ್ಕೆಗಾರ ಸುನಿಲ್ ಜೋಶಿ ಅವರು ನಾಗ್ಪುರದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕಾಗಿ ಭಾರತದ ತಮ್ಮ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ.

ಚೇತೇಶ್ವರ ಪೂಜಾರ ಆಡುವ 11ರ ಬಳಗದಿಂದ ಹೊರಗೆ
ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟು, ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದು, ಸ್ಫೋಟಕ ಬ್ಯಾಟರ್‌ಗೆ ಚೊಚ್ಚಲ ಅವಕಾಶ ನೀಡುವಂತೆ ಸಲಹೆ ನೀಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ ಮತ್ತು ಸುನಿಲ್ ಜೋಶಿ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಮೊದಲ ಟೆಸ್ಟ್‌ನಲ್ಲಿ ಶತಕ ಮತ್ತು 90 ರನ್ ಗಳಿಸಿದ್ದರು. ಅವರ ಬ್ಯಾಟಿಂಗ್ ಫಾರ್ಮ್ ಮತ್ತು ಅವರ ಸ್ಥಾನ ಭಾರತ ತಂಡಕ್ಕೆ ಉತ್ತಮವಾಗಿದೆ. ಹೀಗಿದ್ದರೂ, ಇನ್ನೂ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡದ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡಿದ್ದಾರೆ ಕನ್ನಡಿಗ ಸುನಿಲ್ ಜೋಶಿ.

ಇಬ್ಬರ ನಡುವೆ ಕಠಿಣ ಆಯ್ಕೆ ಎಂದು ಒಪ್ಪಿಕೊಂಡ ಸುನಿಲ್ ಜೋಶಿ
ಆದರೂ, ಚೇತೇಶ್ವರ ಪೂಜಾರ ಮತ್ತು ಸೂರ್ಯಕುಮಾರ್ ಯಾದವ್ ಈ ಇಬ್ಬರ ನಡುವೆ ಕಠಿಣ ಆಯ್ಕೆಯಾಗಿರಲಿದೆ ಎಂದು ಒಪ್ಪಿಕೊಂಡಿರುವ ಸುನಿಲ್ ಜೋಶಿ, ನಾಗ್ಪುರದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರಿಗಿಂತ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದ್ದಾರೆ.
"ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಈ ರೀತಿ ಆಯ್ಕೆ ಮಾಡಲಿದೆಯೇ?, ಚೇತೇಶ್ವರ ಪೂಜಾರ ಮತ್ತು ಸೂರ್ಯಕುಮಾರ್ ಯಾದವ್ ನಡುವೆ ಪೈಪೋಟಿ, ಎಡಗೈ ಸ್ಪಿನ್ ಬೌಲರ್‌ಗಳಾದ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ನಡುವೆ ಕಠಿಣ ಸ್ಪರ್ಧೆ ಇರಲಿದೆ," ಎಂದು ಟ್ವೀಟ್ ಮಾಡಿರುವ ಅವರು ತಮ್ಮ ಆಯ್ಕೆಯ ಭಾರತದ ಆಡುವ 11ರ ಬಳಗವನ್ನು ತಿಳಿಸಿದ್ದಾರೆ.
ಸುನಿಲ್ ಜೋಶಿ ಆಯ್ಕೆಯ ಭಾರತದ ಆಡುವ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಸುನಿಲ್ ಜೋಶಿ ಸಲಹೆ ಟೀಕಿಸಿದ ದೊಡ್ಡ ಗಣೇಶ್
ಚೇತೇಶ್ವರ ಪೂಜಾರ ಬದಲಿಗೆ ಸೂರ್ಯಕುಮಾರ್ ಯಾದವ್‌ನನ್ನು ಆಯ್ಕೆ ಮಾಡುವ ಸುನಿಲ್ ಜೋಶಿ ಸಲಹೆಗೆ, ಅವರ ಮಾಜಿ ಸಹ ಆಟಗಾರ ಮತ್ತು ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಟೀಕಿಸಿದ್ದಾರೆ.
"ಮಾಜಿ ಆಯ್ಕೆಗಾರರೊಬ್ಬರು ಚೇತೇಶ್ವರ ಪೂಜಾರ ಅವರಿಗಿಂತ ಮುಂಚಿತವಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಬೇಕೆಂದು ಬಯಸುತ್ತಾರೆ. ಅದು ಸಾಧ್ಯವಾಗುವುದಿಲ್ಲ. ಚೇತೇಶ್ವರ ಪೂಜಾರ ಅವರನ್ನು ಬದಲಾಯಿಸಬೇಕೆಂದು ಯೋಚಿಸುವುದು ದುರಂತವಾಗಿದೆ. ಇನ್ನೂ ಟೆಸ್ಟ್ ಕ್ರಿಕೆಟ್ ಆಡದ ಆಟಗಾರನಿಗಾಗಿ ಚೇತೇಶ್ವರ ಪೂಜಾರ ತನ್ನ ವೃತ್ತಿಜೀವನದುದ್ದಕ್ಕೂ ಬಲಿಪಶುವಾದರೂ ಆಶ್ಚರ್ಯವೇನಿಲ್ಲ," ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications