
ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು (ಗುರುವಾರ, ಫೆಬ್ರವರಿ 9) ನಾಗ್ಪುರದಲ್ಲಿ ಪ್ರಾರಂಭವಾಗಲಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಪಂದ್ಯಕ್ಕೆ ನೀಡಿರುವ ಪಿಚ್‌ಗೆ ಸಂಬಂಧಿಸಿದ ವಿವಾದದಿಂದಾಗಿ ಪಂದ್ಯ ಆರಂಭಕ್ಕೂ ಮುನ್ನವೇ ವಿಶ್ವದ ಗಮನ ಸೆಳೆದಿದೆ.
ಫಾಕ್ಸ್ ಕ್ರಿಕೆಟ್‌ನಲ್ಲಿನ ವರದಿಯ ಪ್ರಕಾರ, "ನಾಗ್ಪುರ ಪಿಚ್‌ನ ವಿಕೆಟ್‌ಗಳ ಮಧ್ಯಭಾಗದಲ್ಲಿ ಮಾತ್ರ ನೀರು ಹಾಕಿ, ವೇಗಿಗಳಿಗೆ ಸಹಕರಿಸದಂತೆ ಮಾಡಲಾಗಿದೆ ಮತ್ತು ಎಡಗೈ ಸ್ಪಿನ್ನರ್‌ಗಳು ಬಾಲ್ ಹಾಕುವ ಪ್ರದೇಶವನ್ನು ಒಣಗಿಸಲಾಗಿದೆ," ಎಂದು ತಿಳಿಸಿದೆ.
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ ಮತ್ತು ಟ್ರಾವಿಸ್ ಹೆಡ್‌ನಂತಹ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟಕರವಾಗಿಸುವ ಪ್ರಯತ್ನವಿದೆ ಎಂಬ ಆರೋಪ ಮಾಡಲಾಗಿದ್ದು, ವಿಕೆಟ್‌ನ ಎರಡೂ ತುದಿಗಳಲ್ಲಿ ಸ್ಪಿನ್ನರ್‌ಗೆ ನೆರವಾಗಲು ಒಣಗಿಸಲಾಗಿದೆ ಎಂದು ವರದಿಯಾಗಿದೆ.

ನಾಗ್ಪುರ ಪಿಚ್ ಬಗ್ಗೆ ಇಂತಹ ವರದಿಗಳು ಕೇಳಿಬಂದ ನಂತರ ಆಸ್ಟ್ರೇಲಿಯಾದ ಹಲವಾರು ಮಾಧ್ಯಮಗಳು, ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾಗ್ಪುರದ ಪಿಚ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಆಸ್ಟ್ರೇಲಿಯಾದ ಮಾಧ್ಯಮಗಳನ್ನು ವ್ಯಂಗ್ಯವಾಗಿ ಟ್ರೋಲ್ ಮಾಡಿ, ಕಾಲೆಳೆದಿದ್ದಾರೆ.
ವಾಸಿಂ ಜಾಫರ್ ತಮ್ಮ ಟ್ವಿಟರ್ ಖಾತೆಯಲ್ಲಿ ಕೊಲಾಜ್ ಅನ್ನು ಹಂಚಿಕೊಂಡಿದ್ದು, "ಆಸ್ಟ್ರೇಲಿಯಾದ ಮಾಧ್ಯಮಗಳು ನಾಗ್ಪುರ ಪಿಚ್ ಅನ್ನು ಮಂಗಳ ಗ್ರಹದ ಅಸಮ ಮೇಲ್ಮೈ ಎಂದು ಪರಿಗಣಿಸುತ್ತಿವೆ," ಎಂದು ಹೇಳುವ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಕೆಟ್‌ನ ಎರಡೂ ತುದಿಗಳಲ್ಲಿ ಪಿಚ್ ಒಣಗಿರುವುದರಿಂದ, ಸ್ಪಿನ್ನರ್‌ಗಳು ಮೇಲ್ಮೈಯಿಂದ ಸಾಕಷ್ಟು ಸಹಾಯವನ್ನು ಪಡೆಯಬಹುದು. ಆದ್ದರಿಂದ ಭಾರತ ತಂಡವು ಆಡುವ 11ರ ಬಳಗದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಆದರೆ, ಭಾರತ ಇನ್ನು ತನ್ನ ಅಂತಿಮ ತಂಡವನ್ನು ಪ್ರಕಟಿಸಿಲ್ಲ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್‌ಗಳನ್ನು ಹೊಂದಿದೆ.
ಇನ್ನು 18 ಸದಸ್ಯರ ತಂಡದೊಂದಿಗೆ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡದಲ್ಲಿ ಆಶ್ಟನ್ ಅಗರ್, ನಾಥನ್ ಲಿಯಾನ್, ಟಾಡ್ ಮರ್ಫಿ ಮತ್ತು ಮಿಚೆಲ್ ಸ್ವೆಪ್ಸನ್ ಅವರಂತಹ ಸ್ಪಿನ್ ಆಯ್ಕೆಗಳನ್ನು ಹೊಂದಿದೆ.
ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶ್ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಕೂಡ ಅರೆಕಾಲಿಕ ಸ್ಪಿನ್ ಬೌಲರ್‌ಗಳಾಗಿದ್ದು, ಪರಿಸ್ಥಿತಿ ನೋಡಿಕೊಂಡು ಬೌಲ್ ಮಾಡಲಿದ್ದಾರೆ.