IND-W vs AUS-W: ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್; ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಭಾರತ

ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂದು (ಭಾನುವಾರ, ಡಿಸೆಂಬರ್ 11) ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ರೋಚಕ ಸೂಪರ್ ಓವರ್‌ಗೆ ಸಾಕ್ಷಿಯಾಯಿತು ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ರೋಚಕ 5 ರನ್‌ಗಳ ಅಂತರದಿಂದ ಗೆದ್ದು ಬೀಗಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಲು ಸಾಧ್ಯವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಭಾರತ ತಂಡಕ್ಕೆ 188 ರನ್‌ಗಳ ಗುರಿ ನೀಡಿತ್ತು.

ಸ್ಮೃತಿ ಮಂಧಾನ 49 ಎಸೆತಗಳಲ್ಲಿ 79 ರನ್
188 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಗೆಲುವಿನ ಸನಿಹದಲ್ಲಿ ಔಟಾಗುವ ಮುನ್ನ 49 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 79 ರನ್ ಬಾರಿಸಿದರು. ಮೊದಲ ವಿಕೆಟ್‌ಗೆ ಶಫಾಲಿ ವರ್ಮಾ ಜೊತೆ 8.4 ಓವರ್‌ಗಳಲ್ಲಿ 76 ರನ್‌ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು.
ಇನ್ನೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 23 ಎಸೆತಗಳಲ್ಲಿ 34 ರನ್ ಗಳಿಸಿ ಸ್ಮೃತಿ ಮಂಧಾನಗೆ ಉತ್ತಮ ಸಾಥ್ ನೀಡಿದರು. ಶಫಾಲಿ ಔಟಾದ ಬಳಿಕ ಕ್ರೀಸ್‌ಗೆ ಬಂದ ಜೆಮಿಮಾ ರೋಡ್ರಿಗಸ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಗ ಬಂದ ಹರ್ಮನ್‌ಪ್ರೀತ್ ಕೌರ್ 21 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ ಮೂರು ಸಿಕ್ಸರ್‌ಗಳ ಸಹಾಯದಿಂದ ಬಾರಿಸಿದ 26 ರನ್ ಪಂದ್ಯದ ನಿರ್ಣಾಯಕ ಅಂಶವಾಗಿತ್ತು.

ಸ್ಮೃತಿ ಮಂಧಾನ ಸಿಕ್ಸರ್ ಹಾಗೂ ಬೌಂಡರಿ
ಕೊನೆಯಲ್ಲಿ ಗೆಲುವಿಗೆ ಒಂದು ಎಸೆತದಲ್ಲಿ 5 ರನ್ ಬೇಕಿದ್ದಾಗ ದೇವಿಕಾ ವೈದ್ಯ ಬಾರಿಸಿದ ಬೌಂಡರಿಯ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆಗ ಸೂಪರ್ ಓವರ್‌ನಲ್ಲಿ ಭಾರತದ ಪರ ರಿಚಾ ಘೋಷ್ ಮತ್ತು ಸ್ಮೃತಿ ಮಂಧಾನ ಬ್ಯಾಟಿಂಗ್ ಆರಂಭಿಸಿದರು. ಮೊದಲ ಎಸೆತವನ್ನು ಸಿಕ್ಸರ್‌ಗಟ್ಟಿದ ರಿಚಾ ಘೋಷ್ ಎರಡನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಇದಾದ ಬಳಿಕ ಸ್ಮೃತಿ ಮಂಧಾನ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಅಂತಿಮವಾಗಿ ಭಾರತ ಒಂದು ಓವರ್‌ನಲ್ಲಿ 20 ರನ್ ಕಲೆಹಾಕಲು ಯಶಸ್ವಿಯಾಯಿತು.

ಐದು ರನ್‌ಗಳ ಅಂತರದಿಂದ ಭಾರತಕ್ಕೆ ವಿಜಯ
21 ರನ್‌ಗಳ ಗುರಿ ಬೆನ್ನತ್ತಿದ ಅಲಿಸ್ಸಾ ಹೀಲಿ ಅವರು ರೇಣುಕಾ ಸಿಂಗ್ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸಿದರು. ಎರಡನೇ ಎಸೆತದಲ್ಲಿ ಸಿಂಗಲ್ ರನ್ ತೆಗೆದುಕೊಂಡರು. ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಆಶ್ಲೀಗ್ ಗಾರ್ಡ್ನರ್ ಅವರು ರಾಧಾ ಯಾದವ್ ಲಾಂಗ್ ಆಫ್‌ನಲ್ಲಿ ಹಿಡಿದ ಉತ್ತಮ ಕ್ಯಾಚ್‌ಗೆ ಔಟಾದರು.
ಅಲಿಸ್ಸಾ ಹೀಲಿ ಅವರು ರೇಣುಕಾ ಸಿಂಗ್ ಬೌಲಿಂಗ್‌ನ ಐದು ಮತ್ತು ಆರನೇ ಎಸೆತದಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರೂ ಇನ್ನೂ ಐದು ರನ್‌ಗಳ ಅಂತರದಿಂದ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯಿತು.

ಬೆತ್ ಮೂನಿ 54 ಎಸೆತಗಳಲ್ಲಿ 82 ರನ್
ಇದಕ್ಕೂ ಮುನ್ನ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ, ಭಾರತ ತಂಡ ಗೆಲ್ಲಲು 188 ರನ್ ಗುರಿ ನೀಡಿತ್ತು.
ಆರಂಭಿಕರಾದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಆಸ್ಟ್ರೇಲಿಯಾ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದರು. 3.3 ಓವರ್‌ಗಳಲ್ಲಿ 29 ರನ್ ಗಳಿಸಿದ್ದಾಗ, 15 ಎಸೆತಗಳಲ್ಲಿ 25 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕಿ ಅಲಿಸ್ಸಾ ಹೀಲಿ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಔಟಾದರು.

ಮುರಿಯದ ಎರಡನೇ ವಿಕೆಟ್‌ಗೆ 158 ರನ್‌ಗಳ ಜೊತೆಯಾಟ
ನಂತರ ಬ್ಯಾಟಿಂಗ್‌ಗೆ ಬಂದ ತಹ್ಲಿಯಾ ಮೆಕ್‌ಗ್ರಾತ್ ಅವರು ಬೆತ್ ಮೂನಿ ಜೊತೆಗೂಡಿ ಮುರಿಯದ ಎರಡನೇ ವಿಕೆಟ್‌ಗೆ 158 ರನ್‌ಗಳ ಜೊತೆಯಾಟ ನೀಡಿದರು. ಬೆತ್ ಮೂನಿ 54 ಎಸೆತಗಳಲ್ಲಿ 82 ರನ್ ಗಳಿಸಿದರೆ, ತಹ್ಲಿಯಾ ಮೆಕ್‌ಗ್ರಾತ್ 51 ಎಸೆತಗಳಲ್ಲಿ 70 ರನ್ ಬಾರಿಸಿದರು.
ಭಾರತ ಪರ ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 31 ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದಂತೆ ಎಲ್ಲ ಬೌಲರ್‌ಗಳ ಹೆಚ್ಚಿನ ರನ್ ಬಿಟ್ಟುಕೊಟ್ಟರಲ್ಲದೆ, ಯಾವುದೇ ವಿಕೆಟ್ ಪಡೆಯಲು ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications