IND vs AUS 2nd Test: 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಮ್ಮ ಕನಸು ಬಹಿರಂಗಪಡಿಸಿದ ಚೇತೇಶ್ವರ ಪೂಜಾರ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರ, ಫೆಬ್ರವರಿ 17ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಎರಡೂ ತಂಡಗಳು ಮೈದಾನ ತಲುಪಿದ್ದು, ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ.
ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಅತಿಥೇಯ ಭಾರತ ತಂಡ ಪ್ರವಾಸಿ ತಂಡದ ವಿರುದ್ಧ ಇನ್ನಿಂಗ್ಸ್ ಹಾಗೂ 132 ರನ್‌ಗಳ ಭರ್ಜರಿ ಜಯ ಗಳಿಸಿ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಇನ್ನು ಈ ಪಂದ್ಯದಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ದೆಹಲಿಯಲ್ಲಿ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡಿದ ಸಾಧನೆ ಮಾಡಲಿದ್ದಾರೆ. ಚೇತೇಶ್ವರ ಪೂಜಾರ 100ನೇ ಟೆಸ್ಟ್ ಪಂದ್ಯದ ಹೆಗ್ಗುರುತಿನ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ತಮ್ಮ ಉತ್ತಮ ಪ್ರದರ್ಶನವನ್ನು ವಿಸ್ತರಿಸಲು ಎದುರು ನೋಡುತ್ತಿದ್ದಾರೆ.

ಭಾರತ ತಂಡವನ್ನು ಚಾಂಪಿಯನ್ ಮಾಡುವ ಭರವಸೆ
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ, ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಸಮಯದಲ್ಲಿ ಭಾರತ ತಂಡಕ್ಕಾಗಿ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದರು.
ಇದೇ ವೇಳೆ ಚೇತೇಶ್ವರ ಪೂಜಾರ ಅವರ ಕನಸಿನ ಬಗ್ಗೆ ಕೇಳಿದಾಗ, "2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡುವ ಭರವಸೆ ಇದೆ," ಎಂದು ಭರವಸೆಯ ಬ್ಯಾಟರ್ ಚೇತೇಶ್ವರ ಪೂಜಾರ ಹೇಳಿದರು.

ಜೂನ್ 7ರಿಂದ 11ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಗೆಲುವಿನ ದೂರದಲ್ಲಿದೆ. ಹೀಗಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಎರಡು ವರ್ಷಗಳಲ್ಲಿ ಎರಡು ಬಾರಿ ಫೈನಲ್ ಪಂದ್ಯವನ್ನು ಆಡಿದ ಮೊದಲ ತಂಡವಾಗಲಿದೆ.
ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಐಸಿಸಿ ದಿನಾಂಕ ಘೋಷಣೆ ಮಾಡಿದ್ದು, ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಜೂನ್ 7ರಿಂದ 11ರವರೆಗೆ ಈ ಪಂದ್ಯ ನಡೆಯಲಿದೆ. ಜೂನ್ 12 ಫೈನಲ್ ಪಂದ್ಯದ ಮೀಸಲು ದಿನವಾಗಿದೆ.

ನಿಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಿದಾಗ ಯಶಸ್ವಿಯಾಗುತ್ತೀರಿ
"100 ಟೆಸ್ಟ್ ಪಂದ್ಯ ಆಡುತ್ತಿರುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳಷ್ಟು ಅರ್ಥಪೂರ್ಣವಾಗಿದೆ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ನನ್ನ ತಂದೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ದೆಹಲಿ ಪಂದ್ಯಕ್ಕೆ ಬರುತ್ತಾರೆ. ಇದೇ ವೇಳೆ ನನ್ನ ಕುಟುಂಬದ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಸಾಧಿಸಲು ಇನ್ನೂ ಬಹಳಷ್ಟು ಇದೆ," ಎಂದು ಚೇತೇಶ್ವರ ಪೂಜಾರ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉಪ ನಾಯಕರಾಗಿದ್ದ ಅಜಿಂಕ್ಯ ರಹಾನೆ ಜೊತೆಗೆ ತಮ್ಮನ್ನು ಟೆಸ್ಟ್ ತಂಡದಿಂದ ಕೈಬಿಟ್ಟ ಬಗ್ಗೆ ಕೇಳಿದಾಗ, ಭಾರತ ತಂಡದಿಂದ ದೂರವಿರುವ ಸಮಯ ಅತ್ಯಂತ ಕಠಿಣವಾಗಿತ್ತು ಎಂದು ಚೇತೇಶ್ವರ ಪೂಜಾರ ಭಾವುಕರಾಗಿ ಮಾತನಾಡಿದರು.
"ಕ್ರೀಡಾಪಟುವಾದವರು ತಾಳ್ಮೆಯನ್ನು ರೂಢಿಸಿಕೊಳ್ಳಬೇಕು. ತಾಳ್ಮೆ ತಾನಾಗಿಯೇ ಬರುವುದಿಲ್ಲ, ಅದಕ್ಕೆ ಮಾನಸಿಕ ಶಕ್ತಿ ಬೇಕಾಗುತ್ತದೆ ಮತ್ತು ಸಿದ್ಧತೆಗಳು ಮುಖ್ಯವಾಗಿರುತ್ತವೆ. ನಾನು ಜೂನಿಯರ್ ಕ್ರಿಕೆಟ್, ವಯೋಮಿತಿ ಕ್ರಿಕೆಟ್‌ನಲ್ಲಿ ರನ್ ಗಳಿಸಿದ್ದೇನೆ. ಇದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ನಿಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಿದಾಗ, ಅಂತಿಮವಾಗಿ ನೀವು ಯಶಸ್ವಿಯಾಗುತ್ತೀರಿ," ಎಂದು ಚೇತೇಶ್ವರ ಪೂಜಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications