IND vs AUS: 100ನೇ ಟೆಸ್ಟ್ ಪಂದ್ಯದಲ್ಲಿ ಸೊನ್ನೆ ಸುತ್ತಿ ಅಪರೂಪದ ದಾಖಲೆ ಬರೆದ ಚೇತೇಶ್ವರ ಪೂಜಾರ; ಪಂದ್ಯದ ವಿವರ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಆತಿಥೇಯ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡ 263 ರನ್‌ಗಳಿಗೆ ಆಲೌಟ್ ಆಗಿತ್ತು. ಪಂದ್ಯದ ಮೊದಲ ದಿನದ ಕೊನೆಯ ಅವಧಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಮೊದಲ ದಿನದ ಮುಕ್ತಾಯದ ಹೊತ್ತಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿತ್ತು.
ಎರಡನೇ ದಿನ ಆರಂಭವಾಗುತ್ತಿದ್ದಂತೆಯೇ ಆಸ್ಟ್ರೇಲಿಯಾ ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಅವರು ಭಾರತದ ಆರಂಭಿಕ ನಾಲ್ಕು ವಿಕೆಟ್ ಪಡೆದು ಆಘಾತ ನೀಡಿದರು. ಉಪನಾಯಕ ಕೆಎಲ್ ರಾಹುಲ್ 17 ರನ್‌ಗಳಿಗೆ ಎಲ್‌ಬಿಡಬ್ಲ್ಯೂ ಆಗಿ ಹೊರ ನಡೆದರೆ, ನಾಯಕ ರೋಹಿತ್ ಶರ್ಮಾ 32 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು.
ಇದೇ ವೇಳೆ ಕ್ರೀಸ್‌ಗೆ ಬಂದ ಹಾಗೂ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಚೇತೇಶ್ವರ ಪೂಜಾರ ತಮ್ಮ ಸ್ಮರಣೀಯ ಪಂದ್ಯದಲ್ಲಿ ಸೊನ್ನೆಗೆ ಔಟಾಗಿ ಕೆಟ್ಟದಾಗಿ ಆಚರಿಸಿದರು. ಇವರ ಹಿಂದೆಯೇ ಶ್ರೇಯಸ್ ಅಯ್ಯರ್ 4 ರನ್ ಗಳಿಸಿದ್ದಾಗ ನಾಥನ್ ಲಿಯಾನ್ ಅವರಿಗೆ ವಿಕೆಟ್ ಒಪ್ಪಿಸಿದರು.

100ನೇ ಟೆಸ್ಟ್‌ನಲ್ಲಿ ಸೊನ್ನೆಗೆ ಔಟಾದ ಭಾರತದ ಎರಡನೇ ಆಟಗಾರ
ರಾಜ್‌ಕೋಟ್ ಮೂಲದ ಬ್ಯಾಟ್ಸ್‌ಮನ್ ಬ್ಯಾಟರ್ ಚೇತೇಶ್ವರ ಪೂಜಾರ ತನ್ನ ಟೆಸ್ಟ್ ಕ್ರಿಕೆಟ್‌ನ ವಿಶೇಷ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ಎಸೆತಗಳ ಎದುರಿಸಿದರೂ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ರೌಂಡ್-ದಿ-ವಿಕೆಟ್ ಬೌಲ್ ಮಾಡಿದ ನಾಥನ್ ಲಿಯಾನ್ ಬಾಲ್ ಅನ್ನು ಅಂದಾಜಿಸಲು ಸಾಧ್ಯವಾಗದೇ ಚೇತೇಶ್ವರ ಪೂಜಾರ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು ನಿರಾಸೆ ಮೂಡಿಸಿದರು.
35 ವರ್ಷದ ಚೇತೇಶ್ವರ ಪೂಜಾರ ತಮ್ಮ 100ನೇ ಟೆಸ್ಟ್‌ನಲ್ಲಿ ಸೊನ್ನೆಗೆ ಔಟಾದ ಭಾರತದ ಎರಡನೇ ಹಾಗೂ ವಿಶ್ವದ ಎಂಟನೇ ಆಟಗಾರ ಎಂಬ ಕೆಟ್ಟ ದಾಖಲೆ ಪಟ್ಟಿಗೆ ಸೇರಿದರು. ಇದಕ್ಕೂ ಮುನ್ನ ಭಾರತ ದಿಲೀಪ್ ವೆಂಗ್‌ಸರ್ಕರ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಕ್‌ಗೆ ಔಟಾಗಿದ್ದರು.

100ನೇ ಟೆಸ್ಟ್ ಪಂದ್ಯದಲ್ಲಿ ಸೊನ್ನೆ ಸುತ್ತಿ ಕೆಟ್ಟ ದಾಖಲೆ ಬರೆದ ಆಟಗಾರರು
ದಿಲೀಪ್ ವೆಂಗ್‌ಸರ್ಕರ್ - ಭಾರತ
ಅಲನ್ ಬಾರ್ಡರ್ - ಆಸ್ಟ್ರೇಲಿಯಾ
ಮಾರ್ಕ್ ಟೇಲರ್ - ಆಸ್ಟ್ರೇಲಿಯಾ
ಸ್ಟೀಫನ್ ಫ್ಲೆಮಿಂಗ್ - ನ್ಯೂಜಿಲೆಂಡ್
ಬ್ರೆಂಡನ್ ಮೆಕಲಮ್ - ನ್ಯೂಜಿಲೆಂಡ್
ಅಲಸ್ಟೈರ್ ಕುಕ್ - ಇಂಗ್ಲೆಂಡ್
ಕರ್ಟ್ನಿ ವಾಲ್ಷ್ - ವೆಸ್ಟ್ ಇಂಡೀಸ್
ಚೇತೇಶ್ವರ ಪೂಜಾರ - ಭಾರತ

100ನೇ ಟೆಸ್ಟ್ ಪಂದ್ಯದ ಕ್ಯಾಪ್ ನೀಡಿದ್ದ ಸುನಿಲ್ ಗವಾಸ್ಕರ್
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ ಪಂದ್ಯಕ್ಕೂ ಮುನ್ನ 1ನೇ ದಿನದಂದು 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಚೇತೇಶ್ವರ ಪೂಜಾರ ಅವರಿಗೆ ಭಾರತ ಮತ್ತು ಆಸ್ಟ್ರೇಲಿಯಾದ ಆಟಗಾರರು ಗೌರವಿಸಿದರು. ಪೂಜಾರ ಅವರು ಮೈದಾನಕ್ಕೆ ಕಾಲಿಡುತ್ತಿದ್ದಂತೆ ಆಟಗಾರರು ಚಪ್ಪಾಳೆಗಳ ಮೂಲಕ ಹುರಿದುಂಬಿಸಿದರು. ಪಂದ್ಯಕ್ಕೂ ಮುನ್ನ ಭಾರತದ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು 100ನೇ ಟೆಸ್ಟ್ ಪಂದ್ಯ ಕ್ಯಾಪ್ ನೀಡಿ, ಶತಕ ಬಾರಿಸು ಎಂದು ಹಾರೈಸಿದ್ದರು.

ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ವಿವರ
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 263 ರನ್‌ಗಳಿಗೆ ಪ್ರತ್ಯುತ್ತರವಾಗಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ ಆಡುತ್ತಿದ್ದು, ಮಧ್ಯಾಹ್ನದ ಚಹಾ ವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ವಿರಾಟ್ ಕೊಹ್ಲಿ 44 ರನ್ ಗಳಿಸಿ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರೆ, ಆಲ್‌ರೌಂಡರ್ ರವೀಂದ್ರ ಜಡೇಜಾ 26 ರನ್ ಗಳಿಸಿ ಟಾಡ್ ಮರ್ಫಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು.
ಸದ್ಯ ಆಲ್‌ರೌಂಡರ್ ಅಕ್ಷರ್ ಪಟೇಲ್ 28 ರನ್ ಹಾಗೂ ರವಿಚಂದ್ರನ್ ಅಶ್ವಿನ್ 11 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ನಾಥನ್ ಲಿಯಾನ್ 5 ವಿಕೆಟ್ ಪಡೆದಿದ್ದರೆ, ಮ್ಯಾಥ್ಯೂ ಕುನ್ನೇಮನ್ ಮತ್ತು ಟಾಡ್ ಮರ್ಫಿ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications