
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಉತ್ತಮ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. 3ನೇ ದಿನದಾಟದ ಅಂತ್ಯಕ್ಕೆ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದೆ.
ಮೂರನೇ ದಿನ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ರೋಹಿತ್ ಶರ್ಮಾ ಔಟಾದ ಬಳಿಕ ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ ಅತ್ಯುತ್ತಮ ಜೊತೆಯಾಟ ಆಡಿದರು. 2ನೇ ವಿಕೆಟ್‌ಗೆ ಈ ಜೋಡಿ 113 ರನ್‌ಗಳ ಜೊತೆಯಾಟ ಆಡಿತು. ಚೇತೇಶ್ವರ ಪೂಜಾರ 121 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು.
ಶುಭಮನ್ ಗಿಲ್ ಮಾತ್ರ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ತಮ್ಮ ಎರಡನೇ ಟೆಸ್ಟ್ ಶತಕವನ್ನು ಪೂರೈಸಿದ ಶುಭಮನ್ ಗಿಲ್ ಭಾರತಕ್ಕೆ ಆಸರೆಯಾದರು. 235 ಎಸೆತಗಳಲ್ಲಿ 12 ಬೌಂಡರಿ 1 ಭರ್ಜರಿ ಸಿಕ್ಸರ್ ನೆರವಿನಿಂದ 128 ರನ್ ಗಳಿಸಿದ ಗಿಲ್ ನಾಥನ್ ಲಿಯಾನ್‌ಗೆ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ರನ್ ಗಳಿಸುವಲ್ಲಿ ವಿಫಲವಾಗಿ ಕೊಹ್ಲಿ ಅಹಮದಾಬಾದ್‌ನಲ್ಲಿ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿದರು. ದಿನದ ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಅವರು ಅಜೇಯ ರನ್ ಗಳಿಸಿದ್ದಾರೆ.

16 ಇನ್ನಿಂಗ್ಸ್‌ಗಳ ಬಳಿಕ ಮೊದಲ ಅರ್ಧಶತಕ
2022ರ ಜನವರಿ ಬಳಿಕ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದರು. ಸತತ 16 ಇನ್ನಿಂಗ್ಸ್‌ಗಳ ನಂತರ ಕಿಂಗ್ ಕೊಹ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದಾರೆ. 128 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 5 ಬೌಂಡರಿ ಸಹಿತ ಅಜೇಯ 59 ರನ್ ಗಳಿಸಿದ್ದು, ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ವಿರಾಟ್ ಕೊಹ್ಲಿಗೆ ಜೊತೆ ಜವಾಬ್ದಾರಿಯತವಾಗಿ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 54 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದ್ದು, ನಾಲ್ಕನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿರುವ ಭಾರತ ಇನ್ನೂ 191 ರನ್‌ಗಳ ಹಿನ್ನಡೆಯಲ್ಲಿದೆ.

ಭಾರತ ತಂಡಕ್ಕಿದೆ ಗೆಲ್ಲುವ ಅವಕಾಶ
ನಾಲ್ಕನೇ ದಿನ ಭಾರತ ತಂಡ ವೇಗವಾಗಿ ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆ ಪಂದ್ಯವನ್ನು ಗೆಲ್ಲುವ ಅವಕಾಶ ಇದೆ. 4ನೇ ದಿನ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್ ಬಂದರೆ ಭಾರತಕ್ಕೆ ಭಾರಿ ಅನುಕೂಲವಾಗಲಿದೆ.
ಪಿಚ್ ಈಗಾಗಲೇ ಬೌಲರ್ ಗಳಿಗೆ ನೆರವು ನೀಡುತ್ತಿರುವುದರಿಂದ ಭಾರತ ಮೊದಲ ಇನ್ನಿಂಗ್ಸ್ ಪಡೆದುಕೊಂಡರೆ, ಆಸ್ಟ್ರೇಲಿಯಾ ಮೇಲೆ ಒತ್ತಡ ಹೇರಬಹುದು. ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಈ ಪಂದ್ಯ ಡ್ರಾ ಆದರೆ ಭಾರತ ಶ್ರೀಲಂಕಾ ನ್ಯೂಜಿಲೆಂಡ್ ಟೆಸ್ಟ್ ಸರಣಿಯ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.