
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ಸರಣಿಗೆ ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಸರ್ಫರಾಜ್ ಖಾನ್‌ಗೆ ಅವಕಾಶ ನೀಡದಿರುವುದು ಬೇಸರ ಮೂಡಿಸಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.
ಜನವರಿ 13ರಂದು ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ ಸೂರ್ಯಕುಮಾರ್ ಯಾದವ್, ಇಶಾನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಸರ್ಫರಾಜ್ ಅವರನ್ನು ಮತ್ತೊಮ್ಮೆ ಕಡೆಗಣಿಸಿರುವುದು ಕಳವಳ ಮೂಡಿಸಿದೆ ಎಂದಿದ್ದಾರೆ ಆಕಾಶ್ ಚೋಪ್ರ. ಆತ ತನಗೆ ಮೋಸವಾಗಿದೆ ಎಂದು ಭಾವಿಸುತ್ತಿರಬಹುದು ಎಂದಿದ್ದಾರೆ ಆಕಾಶ್ ಚೋಪ್ರ.
"ಸರ್ಫರಾಜ್ ಹೆಸರು ಇನ್ನು ಕೂಡ ಇಲ್ಲ. ಈ ಬಾರಿಯಾದರೂ ತನ್ನ ಹೆಸರು ಇರಬಹುದು ಎಂದು ಭಾವಿಸಿದ್ದ ಅವರಿಗೆ ಈಗ ತನಗೆ ಮೋಸವಾಗಿದೆ ಎಂಬ ಭಾವನೆ ಬರಬಹುದು. ಈ ತಂಡದಲ್ಲಿ ಬೂಮ್ರಾ ಹೆಸರು ಕೂಡ ಇಲ್ಲ. ಇದು ಮತ್ತೊಂದು ಪ್ರಮುಖ ಸುದ್ದಿ. ಆದರೆ ನನಗೆ ಕಳವಳ ಮೂಡಿಸಿರುವುದು ಸರ್ಫರಾಜ್ ಹೆಸರು ಇಲ್ಲದ ಕಾರಣಕ್ಕೆ" ಎಂದಿದ್ದಾರೆ ಆಕಾಶ್ ಚೋಪ್ರ.
ಮುಂದುವರಿದು ಮಾತನಾಡಿರುವ ಆಕಾಶ್ ಚೋಪ್ರ ಈ ಟೆಸ್ಟ್ ತಂಡದಲ್ಲಿ ಸೂರ್ಯಕುಮಾರ್ ಅವರಿಂತ ಸರ್ಫರಾಜ್ ಸ್ಥಾನವನ್ನು ಪಡೆಯಲು ಹೆಚ್ಚು ಅರ್ಹ ಎಂದಿದ್ದಾರೆ. ಯಾಕೆಂದರೆ ಪ್ರಥಮದರ್ಜೆ ಕ್ರಿಕೆಟ್‌ಲ್ಲಿ ಆತನ ಪ್ರದರ್ಶನ ಅದ್ಭುತವಾಗಿದೆ ಎಂದು ವಿವರಿಸಿದ್ದಾರೆ ಆಕಾಶ್ ಚೋಪ್ರ. "ಸೂರ್ಯಕುಮಾರ್‌ಗೆ ಅವಕಾಶ ನೀಡತ್ತಿದ್ದೀರಿ ಎಂದಾದರೆ ಅಲ್ಲಿ ಒಂದು ಹೊಸ ಅವಕಾಶ ತೆರೆದಿತ್ತು ಎಂದರ್ಥ. ಆ ಸ್ಥಾನದಲ್ಲಿ ಸರ್ಫರಾಜ್‌ಗೆ ಅವಕಾಶ ದೊರೆಯಬೇಕಾಗಿತ್ತು ಎಂಬುದು ನನ್ನ ಭಾವನೆ. ಯಾಕೆಂದರೆ ಸರ್ಫರಾಜ್ ಅವರ ಪ್ರಥಮದರ್ಜೆ ಸರಾಸರಿ 80. ಆತನನ್ನು ಬಿಟ್ಟರೆ ಕೇವಲ ಡಾನ್ ಬ್ರಾಡ್ಮನ್ ಮಾತ್ರವೇ ಇಷ್ಟು ಪಂದ್ಯಗಳನ್ನು ಆಡಿ 80ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿರುವುದು" ಎಂದಿದ್ದಾರೆ ಆಕಾಶ್ ಚೋಪ್ರ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿರುವ ತಂಡದಲ್ಲಿ ಮುಂಬೈನ ಸರ್ಫರಾಜ್‌ಗೆ ಅವಕಾಶ ದೊರೆಯದಿರುವ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ಆವೃತ್ತಿಗಳಿಂದ ರಣಜಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಈ ಬಾರಿಯ ರಣಜಿ ಆವೃತ್ತಿಯಲ್ಲಿ ಮುಂಬೈ ಪರವಾಗಿ ಆಡಿರುವ ಐದು ಪಂದ್ಯಗಳಲ್ಲಿ ಭರ್ಜರಿ 431 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಒಂದು ಅರ್ಧ ಶತಕ ಸೇರಿದೆ. ಕಳೆದ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 982 ರನ್‌ಗಳನ್ನು ಬಾರಿಸಿ ಅಬ್ಬರಿಸಿದ್ದರು. 122.75ರ ಸರಾಸರಿಯಲ್ಲಿ ಅವರು ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಸರ್ಫರಾಜ್ ಖಾನ್ ಅವರನ್ನು ನಿರ್ಲಕ್ಷ್ಯ ಮಾಡಿ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಆಯ್ಕೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸರ್ಫರಾಜ್ ಖಾನ್ ನಿರ್ಲಕ್ಷ್ಯ ಮಾಡಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಕಾಮೆಂಟೇಟರ್ ಹರ್ಷ ಭೋಗ್ಲೆ "ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್‌ಗೆ ಇದು ಖಂಡಿತವಾಗಿಯೂ ಅರಗಿಸಿಕೊಳ್ಳಲು ಬಹಳ ಕಷ್ಟವಾಗಲಿದೆ. ಇದಕ್ಕಿಂತ ಹೆಚ್ಚಿನದ್ದನ್ನು ಮಾಡಿಲು ಅಸಾಧ್ಯ"ಎಂದಿದ್ದಾರೆ. ಇನ್ನೊಬ್ಬರು ಅಭಿಮಾನಿ "ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿರುವುದು ರಣಜಿ ಟ್ರೋಫಿಗೆ ಮಾಡಿರುವ ಅವಮಾನ. ರಣಜಿಯಲ್ಲಿ ಅಬ್ಬರಿಸುತ್ತಿರುವ ಆ ಯುವ ಆಟಗಾರ ತಂಡದಲ್ಲಿ ಸ್ಥಾನ ಪಡೆಯಲು ಅತ್ಯಂತ ಅರ್ಹ. ಆಯ್ಕೆ ಮಂಡಳಿಯಿಂದ ಮತ್ತೊಮ್ಮೆ ಆಘಾತಕಾರಿ ನಿರ್ಧಾರ" ಎಂದು ಸರ್ಫರಾಜ್ ಉದ್ದೇಶಿಸಿ ಮಾತನಾಡಿದ್ದಾರೆ.