
ಅಹಮದಾಬಾದ್ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಗಳಿಸಿದರು. ಪಂದ್ಯದ ನಾಲ್ಕನೇ ದಿನ ಕೊನೆಯವರೆಗೂ ಬ್ಯಾಟಿಂಗ್ ಮಾಡಿದ ಅವರು ದಿನದ ಆಟದ ಮುಕ್ತಾಯಕ್ಕೆ ಒಂದು ಗಂಟೆಗೆ ಮುನ್ನ ಔಟಾದರು. ಸತತ ಮೂರು ವರ್ಷಗಳ ಕಾಯುವಿಕೆ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿ ಮಿಂಚಿದರು.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 571 ರನ್‌ಗಳಿಗೆ ಔಟಾಗುವ ಮೂಲಕ 91 ರನ್‌ಗಳ ಮುನ್ನಡೆ ಪಡೆದುಕೊಂಡಿತು. ವಿರಾಟ್ ಕೊಹ್ಲಿ ಶತಕದ ಬಗ್ಗೆ ಅವರ ಪತ್ನಿ ಅನುಷ್ಕಾ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಕೊಹ್ಲಿ ಜ್ವರದಿಂದ ಬಳಲುತ್ತಿದ್ದರು ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಅನುಷ್ಕಾ ಶರ್ಮಾ ಪೋಸ್ಟ್‌ನಿಂದ ತಿಳಿದುಬಂದಿದೆ. ಕೊಹ್ಲಿ ಶತಕದ ಖುಷಿಯನ್ನು ಹಂಚಿಕೊಂಡಿರುವ ಅವರು, ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. "ಅನಾರೋಗ್ಯವಿದ್ದರೂ ಈ ರೀತಿ ಶಾಂತವಾಗಿ ಆಡುತ್ತಿರುವುದು ನನಗೆ ಯಾವಾಗಲೂ ಸ್ಪೂರ್ತಿ ನೀಡುತ್ತದೆ" ಎಂದು ಹೇಳಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪೃತಿ ನಾರಾಯಣನ್ ನಂತರ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕೊಹ್ಲಿ ಜ್ವರದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಜ್ವರದ ನಡುವೆಯೂ 50ಕ್ಕೂ ಹೆಚ್ಚು ಓವರ್‌ಗಳನ್ನು ತಾವೇ ಎದುರಿಸಿದರು. ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ, ಕೊಹ್ಲಿ ಭಾರತವನ್ನು ಸುರಕ್ಷಿತ ದಡಕ್ಕೆ ಕೊಂಡೊಯ್ದರು ಎಂದು ಹೇಳಿದ್ದಾರೆ.

40 ಡಿಗ್ರಿ ಬಿಸಿಲಿನಲ್ಲಿ 8 ಗಂಟೆಗಳ ಕಾಲ ಬ್ಯಾಟಿಂಗ್
ಅಹಮದಾಬಾದ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲೂ ವಿರಾಟ್ ಕೊಹ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. 364 ಎಸೆತಗಳನ್ನು ಎದುರಿಸಿದ ಅವರು 186 ರನ್ ಗಳಿಸಿದರು. ಸುಮಾರು 8 ಗಂಟೆಗಳ ಕಾಲ ಕ್ರೀಸ್‌ನಲ್ಲಿ ಸಮಯ ಕಳೆದ ಕೊಹ್ಲಿ ಜ್ವರದ ನಡುವೆಯೂ ತಾಳ್ಮೆಯ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಶತಕವನ್ನು ಪೂರೈಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75 ಶತಕವನ್ನು ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಜ್ವರ ಇರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ವಿರಾಟ್ ಕೊಹ್ಲಿ ಮೇಲಿನ ಗೌರವ ಹೆಚ್ಚಾಯಿತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟದ ಮೇಲಿನ ಕೊಹ್ಲಿಯ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ಉತ್ತಮ ಸ್ಥಿತಿಯಲ್ಲಿ ಭಾರತ ತಂಡ
ವಿರಾಟ್ ಕೊಹ್ಲಿ ಅಮೋಘ ಶತಕದ ನೆರವಿನಿಂದ ಭಾರತ 4ನೇ ಟೆಸ್ಟ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಶುಭಮನ್ ಗಿಲ್ ಶತಕ ಗಳಿಸಿದ ಬಳಿಕ ತಮ್ಮ ಇನ್ನಿಂಗ್ಸ್ ಮುಂದುವರೆಸಿದ ಕೊಹ್ಲಿ ಜಡೇಜಾ, ಕೆಎಸ್ ಭರತ್, ಅಕ್ಷರ್ ಪಟೇಲ್‌ರೊಂದಿಗೆ ಅತ್ಯುತ್ತಮ ಜೊತೆಯಾಟ ಆಡಿದರು.
ಭಾರತ 4ನೇ ದಿನದಾಟ ಮುಕ್ತಾಯಕ್ಕೆ 10 ಓವರ ಗಳಿದ್ದಾಗ 91 ರನ್‌ಗಳ ಮುನ್ನಡೆಯೊಂದಿಗೆ 571 ರನ್ ಗಳಿಸಿ ಆಲೌಟ್ ಆಯಿತು. ಬೆನ್ನುನೋವಿನ ಕಾರಣ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡಲು ಆಗಮಿಸಲಿಲ್ಲ. ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 6 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ.
ಭಾರತ ಈ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಅಲ್ಲದೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಟೆಸ್ಟ್ ತಂಡವೆನಿಸಿಕೊಳ್ಳಲಿದೆ.