
ಭಾನುವಾರ, ಮಾರ್ಚ್ 19ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯರು ಸಾಧಾರಣ ಮೊತ್ತ ದಾಖಲಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆಸ್ಟ್ರೇಲಿಯಾ ಬೌಲರ್‌ಗಳನ್ನು ಎದುರಿಸಲು ವಿಫಲವಾಗಿ 26 ಓವರ್‌ಗಳಲ್ಲಿ ಕೇವಲ 117 ರನ್‌ಗಳಿಗೆ ಸರ್ವಪತನ ಕಂಡಿದ್ದು, ಪ್ರವಾಸಿ ತಂಡಕ್ಕೆ 118 ರನ್‌ಗಳ ಸುಲಭ ಗುರಿ ನೀಡಿದೆ.
ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ ನಡೆಸಿ, ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಇದೇ ವೇಳೆ 8 ಓವರ್‌ಗಳಲ್ಲಿ 53 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು.

ಉಳಿದಂತೆ ಸೀನ್ ಅಬೋಟ್ 6 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ನಾಥನ್ ಎಲ್ಲಿಸ್ 5 ಓವರ್‌ಗಳಲ್ಲಿ 13 ರನ್ ನೀಡಿ ಉಳಿದ 2 ವಿಕೆಟ್ ಬಾಚಿದರು.
ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟರ್‌ಗಳು ಸಂಪೂರ್ಣ ವಿಫಲವಾದರು. ಮೊದಲ ಓವರ್‌ನ್ 3ನೇ ಎಸೆತದಲ್ಲಿಯೇ ಶುಭ್ಮನ್ ಗಿಲ್ ಔಟಾದರು. ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿ ವಿಕೆಟ್ ನೀಡಿದರು.
ನಂತರ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಆಗಿ ಸೊನ್ನೆ ಸುತ್ತಿದರು. ಮೊದಲ ಪಂದ್ಯದಲ್ಲೂ ಅವರು ಸೊನ್ನೆಗೆ ಔಟಾಗಿದ್ದರು. ಕಳೆದ ಪಂದ್ಯದ ಹೀರೋ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಕೂಡ ನಾಥನ್ ಎಲ್ಲಿಸ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾಗುವ ಮುನ್ನ 35 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 31 ರನ್ ಬಾರಿಸಿದರು. ಇದು ತಂಡದ ಪರ ಗರಿಷ್ಠ ಸ್ಕೋರ್ ಆಗಿದೆ.

ಉಪನಾಯಕ ಹಾರ್ದಿಕ್ ಪಾಂಡ್ಯ ತಮ್ಮ ನೈಜ ಆಟ ಆಡಲು ವಿಫಲವಾಗಿ ಕೇವಲ 1 ರನ್ ಗಳಿಸಿ ಔಟಾದರು. ಆಲ್‌ರೌಂಡರ್ ರವೀಂದ್ರ ಜಡೇಜಾ 16 ರನ್ ಗಳಿಸಿ ನಿಧಾನಗತಿಯಲ್ಲಿ ಆಡುತ್ತಿದ್ದಾಗ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಮತ್ತೊಬ್ಬ ಆಲ್‌ರೌಂಡರ್ ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 29 ರನ್ ಬಾರಿಸಿ ತಂಡದ ಮೊತ್ತ 100ರ ಗಡಿ ತಲುಪುವಲ್ಲಿ ಸಹಕಾರಿಯಾದರು.
ಮೊದಲ ಪಂದ್ಯ ಗೆದ್ದಿರುವ ಭಾರತ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಜಯದೊಂದಿಗೆ ಭಾರತ ತಂಡ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಎರಡು ಬದಲಾವಣೆ ಮಾಡಿದೆ. ನಾಯಕ ರೋಹಿತ್ ಶರ್ಮಾ ಮರಳಿರುವುದರಿಂದ, ಇಶಾನ್ ಕಿಶನ್ ಹೊರಗುಳಿದಿದ್ದಾರೆ. ಇನ್ನು ಆಲ್‌ರೌಂಡರ್ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ, ಆಸ್ಟ್ರೇಲಿಯಾ ತಂಡದಲ್ಲಿಯೂ ಎರಡು ಬದಲಾವಣೆಗಳಾಗಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಬದಲಿಗೆ ನಾಥನ್ ಎಲ್ಲಿಸ್, ಜೋಶ್ ಇಂಗ್ಲಿಸ್ ಬದಲಿಗೆ ಅಲೆಕ್ಸ್ ಕ್ಯಾರಿ ಸ್ಥಾನ ಪಡೆದಿದ್ದಾರೆ.
ಭಾರತ vs ಆಸ್ಟ್ರೇಲಿಯ 2ನೇ ಏಕದಿನ ಪಂದ್ಯದ ಆಡುವ 11ರ ಬಳಗ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್.
ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ (ನಾಯಕ), ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಶ್ಚಾಗ್ನೆ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಕ್ಯಾಮೆರಾನ್ ಗ್ರೀನ್, ನಾಥನ್ ಎಲ್ಲಿಸ್, ಸೀನ್ ಅಬಾಟ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.