IND vs AUS: ಕಷ್ಟಕರ ಪಿಚ್‌ನಲ್ಲಿ ಅನಿರೀಕ್ಷಿತ ಶತಕ; ರೋಹಿತ್ ಶರ್ಮಾಗೆ ಪ್ರಶಂಸೆಗಳ ಸುರಿಮಳೆ

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಭಾರತದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಗಳಿಸಿದರು.
ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ 9ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸುತ್ತಿದ್ದಂತೆ, ಆಟಗಾರನಾಗಿ ಮತ್ತು ನಾಯಕನಾಗಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪ (ಟೆಸ್ಟ್, ಏಕದಿನ ಮತ್ತು ಟಿ20)ಗಳಲ್ಲಿ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಲು ಆಕ್ರಮಣಕಾರಿ ಆಟದ ಜೊತೆಗೆ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿದರು. ಅಂತಿಮವಾಗಿ 212 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 120 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ನಾಯಕ
ರೋಹಿತ್ ಶರ್ಮಾ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ನಾಯಕರಾದರು. ರೋಹಿತ್ ಭಾರತದ ನಾಯಕನಾಗಿ ತಮ್ಮ ಮೂರನೇ ಟೆಸ್ಟ್‌ನಲ್ಲಿ ಈ ಹೆಗ್ಗುರುತನ್ನು ತಲುಪಿದರು.
100ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರೂ ಸಹ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯಿಂದ ಮಾಡಲಾಗದ ಸಾಧನೆಯನ್ನು ಮಾಡಿದರು. ಇದೇ ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಶತಕ ಗಳಿಸಿದ ಭಾರತದ ಹತ್ತನೇ ನಾಯಕರೆನಿಸಿಕೊಂಡರು.
ಮೊದಲ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಮುನ್ನಡೆ
ರೋಹಿತ್ ಶರ್ಮಾ ಅವರ ದಾಖಲೆಯ ಶತಕದ ಸಹಾಯದಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
"ಎಲ್ಲರೂ ನಾಗ್ಪುರದ ಪಿಚ್ ಅನ್ನು ವಿಷಕಾರುವ ನಾಗರಹಾವು ಎಂದು ಭಾವಿಸಿದ್ದರು. ಆದರೆ ಭಾರತದ ನಾಯಕ ರೋಹಿತ್ ಶರ್ಮಾ ಅದನ್ನು ಬೆಲ್ಟ್ ರೀತಿ ಕಾಣುವಂತೆ ಬ್ಯಾಟ್ ಮಾಡಿದರು," ಎಂದು ಶ್ಲಾಘಿಸಿ ಭಾರತದ ಮಾಜಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.
ಯಾರೂ ಅರ್ಧಶತಕ ಸ್ಕೋರ್ ಗಳಿಸದ ಪಿಚ್‌ನಲ್ಲಿ ಗುಣಮಟ್ಟದ ಶತಕ
ಇದೇ ವೇಳೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿ, "ನಾಯಕ ರೋಹಿತ್ ಶರ್ಮಾ ಚೆನ್ನಾಗಿ ಆಡಿದರು, ಮೊದಲ 4 ಸೆಷನ್‌ಗಳಲ್ಲಿ ಯಾರೂ ಅರ್ಧಶತಕ ಸ್ಕೋರ್ ಗಳಿಸದ ಪಿಚ್‌ನಲ್ಲಿ ಉತ್ತಮ ಗುಣಮಟ್ಟದ ಶತಕ ಬಾರಿಸಿದರು".
"ರೋಹಿತ್ ಶರ್ಮಾ ಶತಕ ಬಾರಿಸಿದರೂ ದೊಡ್ಡಮಟ್ಟದಲ್ಲಿ ಆಚರಿಸಲಿಲ್ಲ ಎಂದು ನಾನು ಭಾವಿಸುತ್ತೇನೆ, ಏಕೆ ಎಂದು ನನಗೆ ಆಶ್ಚರ್ಯವಾಗಿದೆ," ಎಂದು ಆಕಾಶ್ ಚೋಪ್ರಾ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾದ 177 ರನ್‌ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ, ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತ್ತು. ಇದೀಗ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿ, 73 ರನ್‌ಗಳ ಮುನ್ನಡೆ ಸಾಧಿಸಿದೆ.
ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ (45) ಮತ್ತು ಅಕ್ಷರ್ ಪಟೇಲ್ (2) ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಟಾಡ್ ಮರ್ಫಿ 29 ಓವರ್‌ಗಳಲ್ಲಿ 68 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications