IND vs AUS: ಭಾರತಕ್ಕೆ ಹಿನ್ನಡೆ; ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್‌ನಿಂದ ಸ್ಟಾರ್ ಬ್ಯಾಟರ್ ಔಟ್!

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ ತವರಿನಲ್ಲಿ ಫೆಬ್ರವರಿ 9ರಿಂದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಲಿದೆ.
ಇದೇ ವೇಳೆ ಬೆನ್ನಿನ ಗಾಯದಿಂದಾಗಿ ಶ್ರೇಯಸ್ ಅಯ್ಯರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯುವುದು ಪಕ್ಕಾ ಆಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರಿಗಿಂತ ಶುಭ್ಮನ್ ಗಿಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಪರಿಗಣಿಸಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಬೆನ್ನು ಸೆಳೆತಕ್ಕೆ ಒಳಗಾದ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯವಾಡುವ ಸೂರ್ಯಕುಮಾರ್ ಯಾದವ್ ಅವರ ಆಸೆ ಮುಂದೂಡಬೇಕಾಗುತ್ತದೆ. ಶುಭ್ಮನ್ ಗಿಲ್ ಅವರು ಶ್ರೇಯಸ್ ಅಯ್ಯರ್ ಸ್ಥಾನವನ್ನು ತುಂಬಲಿದ್ದಾರೆ.
ತಮ್ಮ ಕಡಿಮೆ ಅವಧಿಯ ಟೆಸ್ಟ್ ವೃತ್ತಿಜೀವನದಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್, ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ 2-0 ಸರಣಿ ಗೆಲುವಿನಲ್ಲಿ ಭಾರತದ ಪರ ಅತ್ಯುತ್ತಮ ಬ್ಯಾಟರ್ ಆಗಿದ್ದರು.

ಶುಭ್ಮನ್ ಗಿಲ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ಪರಿಗಣಿಸಲಾಗಿತ್ತು
"2021ರಲ್ಲಿ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಭಾರತ ತಂಡದ ಇನ್ನಿಂಗ್ಸ್ ತೆರೆಯುತ್ತಿದ್ದರು. ಹೀಗಾಗಿ, ಶುಭ್ಮನ್ ಗಿಲ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ಪರಿಗಣಿಸಲಾಗಿತ್ತು. ನಂತರ ಕೆಎಲ್ ರಾಹುಲ್ ಗಾಯಗೊಂಡಾಗ ಶುಭ್ಮನ್ ಗಿಲ್ ಇನ್ನಿಂಗ್ಸ್ ತೆರೆಯಬೇಕಾಯಿತು," ಎಂದು ಬಿಸಿಸಿಐ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.
ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಂತರ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರೀಸ್‌ಗಿಳಿಯಲಿದ್ದಾರೆ. ಭಾರತ ತಂಡದಲ್ಲಿ ಐದನೇ ಕ್ರಮಾಂಕವು ಬಹಳ ಮುಖ್ಯವಾಗುತ್ತದೆ.

ಕಳೆದ ಬಾರಿ ಆಸೀಸ್ ನೆಲದಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತ ತಂಡ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರು ನೋಡುತ್ತಿವೆ. ಹೀಗಾಗಿ ಈ ಸರಣಿ ಎಂದಿಗಿಂತ ಹೆಚ್ಚು ಮಹತ್ವ ಪಡೆದಿದೆ. ಕಳೆದ ಬಾರಿ ಆಸೀಸ್ ನೆಲದಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತ ತಂಡ, ಇದೀಗ ತವರಿನಲ್ಲಿ ಗೆದ್ದು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದ್ದು, ನಂತರದ ಪಂದ್ಯಗಳು ದೆಹಲಿ, ಧರ್ಮಶಾಲಾ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications