
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಕಳಪೆ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಸೂರ್ಯಕುಮಾರ್ ಯಾದವ್ ಮೊದಲನೇ ಎಸೆತದಲ್ಲೇ ಔಟಾಗಿದ್ದಾರೆ.
ಮುಂಬೈನಲ್ಲಿ ನಡೆದ ಮೊದಲನೇ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಮೊದಲನೇ ಎಸೆತದಲ್ಲೇ ಔಟಾಗಿದ್ದರು. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಅವರು ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟಾದ ನಂತರ ಅಭಿಮಾನಿಗಳು ಬಿಸಿಸಿಐ ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಏಕದಿನ ಮಾದರಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್‌ರನ್ನು ಕಡೆಗಣಿಸಿ ಸೂರ್ಯಕುಮಾರ್ ಯಾದವ್‌ಗೆ ಮಣೆ ಹಾಕಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಏಕದಿನ ವಿಶ್ವಕಪ್ ವರ್ಷದಲ್ಲಿ ಅತ್ಯುತ್ತಮ ತಂಡವನ್ನು ಕಟ್ಟಬೇಕಾದ ಸಂದರ್ಭದಲ್ಲಿ ಪ್ರತಿಭಾವಂತರನ್ನು ಬಿಸಿಸಿಐ ಬೇಕಂತಲೆ ಕಡೆಗಣಿಸಿದೆ ಎಂದು ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜನವರಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಸಂಜುಸ್ಯಾಮ್ಸನ್ ಸದ್ಯ 100 ಪ್ರತಿಶತ ಫಿಟ್ ಆಗಿದ್ದಾರೆ. ಆದರೂ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರು.

ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಬೆಸ್ಟ್!
ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಭಾರತ ತಂಡದ ಮ್ಯಾಚ್ ವಿನ್ನಿಂಗ್ ಪ್ಲೇಯರ್. ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅದಕ್ಕೆ ಅವರು ಟಿ20 ಯಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ.
ಆದರೆ, ದೀರ್ಘಸ್ವರೂಪದಲ್ಲಿ ಅವರು ರನ್ ಗಳಿಸುವಲ್ಲಿ ಸೋತಿದ್ದಾರೆ. ಅವರು ಆಡಿದ ಕೊನೆಯ 10 ಏಕದಿನ ಪಂದ್ಯಗಳಲ್ಲಿ 34 ರನ್ ಅವರ ವೈಯಕ್ತಿಕ ಸ್ಕೋರ್ ಆಗಿದೆ. 10 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 9, 8, 4, 34, 6, 4, 31, 14, 0, 0, ರನ್ ಗಳಿಸಿ ಔಟಾಗಿದ್ದಾರೆ. ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ಕೈಬಿಟ್ಟು ಟಿ20 ಮಾದರಿಯಲ್ಲಿ ಮಾತ್ರ ತಂಡದಲ್ಲಿ ಉಳಿಸಿಕೊಳ್ಳಬೇಕು ಎನ್ನುವ ವಾದ ಕೂಡ ವ್ಯಕ್ತವಾಗಿದೆ.

ಸಂಜು ಸ್ಯಾಮ್ಸನ್ ಬಗ್ಗೆ ನಿರ್ಲಕ್ಷ್ಯ ಯಾಕೆ
ಸಂಜು ಸ್ಯಾಮ್ಸನ್ ಬಗ್ಗೆ ಬಿಸಿಸಿಐ ಮತ್ತು ಆಯ್ಕೆದಾರರು ಪದೇ ಪದೇ ಯಾಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುವುದರಿಂದ ಸಂಜು ಸ್ಯಾಮ್ಸನ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಸಿಸಿಐ ಸಂಜು ಸ್ಯಾಮ್ಸನ್ ವಿಚಾರದಲ್ಲಿ ಬೇಕಂತಲೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, ಈಗಲೂ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೂರ್ಯಕುಮಾರ್ ಯಾದವ್‌ಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಅಂತರದಲ್ಲಿ ಸೋಲು ಕಂಡಿದೆ. ಭಾರತ 117 ರನ್‌ಗಳಿಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ 31, ಅಕ್ಷರ್ ಪಟೇಲ್ 29 ರನ್ ಗಳಿಸಿದರೆ ಉಳಿದ ಬ್ಯಾಟರ್ ಗಳು ವಿಫಲವಾದರು.
ಆಸ್ಟ್ರೇಲಿಯಾ ಕೇವಲ 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಈ ಗುರಿಯನ್ನು ಬೆನ್ನತ್ತುವ ಮೂಲಕ ದಾಖಲೆಯ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಸರಣಿಯ ಮೂರನೇ ಏಕದಿನ ಪಂದ್ಯ ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಲು ಉತ್ತಮ ಅವಕಾಶವಾಗಿದೆ.