
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಮೋಘ ಶತಕ ಬಾರಿಸಿ, ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡಿದರು.
ಇದೇ ವೇಳೆ ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ನಂತರ ರೋಹಿತ್ ಶರ್ಮಾಗೆ ಅವರ ಪತ್ನಿ ರಿತಿಕಾ ಸಜ್ದೇಹ್ ವಿಶೇಷ ಮನವಿಯನ್ನು ಮಾಡಿದ್ದಾರೆ.
ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಅವರು ತಮ್ಮ ಪತಿ ಕ್ರೀಸ್‌ನಲ್ಲಿ ಆಡುತ್ತಿರುವಾಗ ಬೆರಳುಗಳನ್ನು ಅಡ್ಡಲಾಗಿ (ಕ್ರಾಸ್) ಇಟ್ಟಿರುವ ಇಮೋಜಿಯನ್ನು ಪೋಸ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಡಿಸೆಂಬರ್ 2015ರಲ್ಲಿ ವಿವಾಹವಾದಾಗಿನಿಂದ ಅವರು ಇದನ್ನು ಅನುಸರಿಸುತ್ತಿದ್ದಾರೆ.

ರೋಹಿತ್ ಶರ್ಮಾ ಭಾರತ ಮತ್ತು ಮುಂಬೈ ಇಂಡಿಯನ್ಸ್ ಪರ ಆಡುವಾಗ ರಿತಿಕಾ ಸಜ್ದೇಹ್ ಸ್ಟೇಡಿಯಂನಲ್ಲಿ ಹಾಜರಿರುತ್ತಾರೆ ಮತ್ತು ತಮ್ಮ ಪತಿಗೆ ಬೆಂಬಲಿಸುವುದನ್ನು ಟಿವಿಯಲ್ಲಿ ನಾವು ನೋಡಿದ್ದೇವೆ.
ಇದೀಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಶತಕದ ನಂತರ ತಮಾಷೆಯಾಗಿ, "ಐ ಲವ್ ಯೂ ರೋಹಿತ್ ಶರ್ಮಾ, ಆದರೆ ದಯವಿಟ್ಟು ಬದಲಿ ಬೆರಳುಗಳನ್ನು ಕಳುಹಿಸಿ" ಎಂಬ ಶೀರ್ಷಿಕೆಯೊಂದಿಗೆ ರೋಹಿತ್ ಶರ್ಮಾ ಶತಕವನ್ನು ಸಂಭ್ರಮಿಸುತ್ತಿರುವ ಚಿತ್ರವನ್ನು ರಿತಿಕಾ ಸಜ್ದೇಹ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 171 ಎಸೆತಗಳಲ್ಲಿ ತಮ್ಮ 9ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮುನ್ನ ಭಾರತ ತಂಡದ ನಾಯಕ 212 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ 120 ರನ್ ಬಾರಿಸಿದರು.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) ನಾಯಕನಾಗಿ ಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.