IND vs AUS 2nd T20I highlights: ಎರಡನೇ ಟಿ20 ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ವಿಷಯಗಳಿವು
ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ನಾಯಕನ ಆಟವಾಡಿದ ರೋಹಿತ್ ಶರ್ಮಾ ಅಜೇಯ 46 ರನ್ ಗಳಿಸುವ ಮೂಲಕ ಎರಡನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್ ಶರ್ಮಾ ನಾಯಕತ್ವದಿಂದ ಹಿಡಿದು ಜಸ್ಪ್ರೀತ್ ಬುಮ್ರಾ ಅವರ ಪುನರಾಗಮನದವರೆಗೆ ಹಲವಾರು ವಿಚಾರಗಳು ಎರಡನೇ ಪಂದ್ಯದಲ್ಲಿ ಗಮನ ಸೆಳೆದವು.
ಟಿ20 ವಿಶ್ವಕಪ್ ತಯಾರಿ ಕುರಿತು ಪ್ರಶ್ನೆಗಳು ಎದ್ದಿರುವಾಗ ಟೀಂ ಇಂಡಿಯಾ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಕ್ಕೆ ಸಂತೋಷವಾಗುತ್ತದೆ. ಅಕ್ಷರ್ ಪಟೇಲ್ (2/13) ಚೆಂಡಿನೊಂದಿಗೆ ಮತ್ತೊಂದು ಅದ್ಭುತ ಆಟವಾಡಿದರು, ಟಿ20 ಮಾದರಿಯಲ್ಲಿ ಅವರ ಮೌಲ್ಯವನ್ನು ಸಾಬೀತುಪಡಿಸಿದರು. ಮೊದಲನೇ ಪಂದ್ಯದಲ್ಲಿ ಮಾಡಿದ್ದ ಹಲವು ತಪ್ಪುಗಳನ್ನು ತಿದ್ದಿಕೊಂಡ ಭಾರತ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತು. ತಂಡದಲ್ಲಿ ಮಾಡಿದ ಹಲವು ಬದಲಾವಣೆಗಳು, ಮೈದಾನದಲ್ಲಿ ಟೀಂ ಇಂಡಿಯಾ ರಣತಂತ್ರ ಮುಖ್ಯವಾಗಿ ಗಮನ ಸೆಳೆಯಿತು.
ಅಭಿಮಾನಿಗಳು ಭಾರತದ ಹೋರಾಟವನ್ನು ನೋಡಿ ರೋಮಾಂಚನಗೊಂಡರು, ಭಾರತದ ಪ್ರದರ್ಶನಕ್ಕೆ ಟ್ವಿಟರ್ ನಲ್ಲಿ ಅಭಿಮಾನಿಗಳು ಬಹುಪರಾಕ್ ಹೇಳಿದ್ದಾರೆ, ಅಲ್ಲದೆ ಮೂರು ವಿಶೇಷ ಕ್ಷಣಗಳ ಬಗ್ಗೆಯೂ ಮಾತನಾಡಿದ್ದಾರೆ.

109 ಮೀಟರ್ ಸಿಕ್ಸರ್ ಬಾರಿಸಿದ ಹಿಟ್ ಮ್ಯಾನ್
ಮಳೆಯಿಂದಾಗಿ ಪಂದ್ಯವನ್ನು 8 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 8 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿತು.
ಗೆಲುವಿಗಾಗಿ 48 ಎಸೆತಗಳಲ್ಲಿ 91 ರನ್ ಗಳಿಸಬೇಕಾಗಿದ್ದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವನ್ನೇ ನೀಡಿದರು. ಮೊದಲನೇ ಓವರ್ ನಲ್ಲಿ ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಮಿಡ್‌ವಿಕೆಟ್‌ನ ಮೇಲೆ 109 ಮೀಟರ್ ಸಿಕ್ಸರ್ ಸಿಡಿಡುವ ಮೂಲಕ ರೋಹಿತ್ ಶರ್ಮಾ 'ಹಿಟ್‌ಮ್ಯಾನ್' ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 20 ಎಸೆತಗಳಲ್ಲಿ 4 ಬೌಂಡರಿ ನಾಲ್ಕು ಸಿಕ್ಸರ್ ಸಹಿತವಾಗಿ ಅಜೇಯ 46 ರನ್ ಗಳಿಸುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಆರಂಭದಿಂದಲೇ ಅತ್ಯಂತ ಹೆಚ್ಚು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದರು. ರೋಹಿತ್ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ದುಬಾರಿ ರನ್ ಬಿಟ್ಟುಕೊಟ್ಟ ಹರ್ಷಲ್ ಪಟೇಲ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್

ಜಸ್ಪ್ರೀತ್ ಬುಮ್ರಾ ಯಾರ್ಕರ್
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತದ ಬೌಲಿಂಗ್ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರಿತು, ಏಷ್ಯಾ ಕಪ್ ಮತ್ತು ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇದು ಸಾಬೀತಾಗಿದೆ. ಬುಮ್ರಾ ಮೊದಲನೇ ಬಾಲ್‌ಗೆ ಆರನ್ ಫಿಂಚ್ ಬೌಂಡರಿ ಹೊಡೆದಾಗ ವಾಪಸಾತಿ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದರು, ಕೆಲವು ಎಸೆತಗಳ ನಂತರ ಯಾರ್ಕರ್ ಬಾಲ್ ಎಸೆದ ಬುಮ್ರಾ ಫಿಂಚ್‌ರನ್ನು ಬೋಲ್ಡ್ ಮಾಡುವ ಮೂಲಕ ಮುಖ್ಯವಾದ ವಿಕೆಟ್ ಪಡೆದುಕೊಂಡರು.
ಈ ವಿಕೆಟ್ ಪಡೆಯುವ ಮೂಲಕ ಚೆಂಡಿನ ಮೇಲೆ ತಾವು ಹೊಂದಿರುವ ನಿಯಂತ್ರಣವನ್ನು ಜಸ್ಪ್ರೀತ್ ಬುಮ್ರಾ ಸಾಬೀತು ಪಡಿಸಿದರು.

ದಿನೇಶ್ ಕಾರ್ತಿಕ್‌ರನ್ನು ಅಪ್ಪಿಕೊಂಡ ಹಿಟ್‌ಮ್ಯಾನ್
ಮೊಹಾಲಿಯಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ರೋಹಿತ್ ಶರ್ಮಾ ತಮಾಷೆಗಾಗಿಯಾದರೂ ದಿನೇಶ್ ಕಾರ್ತಿಕ್ ಅವರ ಕತ್ತು ಹಿಡಿದರು ಎಂಬುದೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನಾಯಕನೊಬ್ಬ ಮೈದಾನದಲ್ಲಿ ಇಂತಹ ವಿಪರೀತ ಭಾವನೆಗಳನ್ನು ತೋರಿಸುವುದು ಸರಿಯೇ ಎಂಬ ಚರ್ಚೆಗಳು ನಡೆಯುತ್ತಿದ್ದವು.
ಆದರೆ ದಿನೇಶ್ ಕಾರ್ತಿಕ್ ಎರಡು ಎಸೆತಗಳಲ್ಲಿ 10 ರನ್ ಗಳಿಸಿ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿದಾಗ ಈ ಬಿರುಕುಗಳ ಅನುಮಾನಗಳಿಗೆ ತೆರೆ ಬಿದ್ದಿತು. ಕಾರ್ತಿಕ್ ಆತ್ಮವಿಶ್ವಾಸದಿಂದ ಆಟವನ್ನು ಮುಗಿಸುವುದನ್ನು ನೋಡಿದ ರೋಹಿತ್ ಶರ್ಮಾ ಸಂತೋಷದಿಂದ ಬಂದು ದಿನೇಶ್ ಕಾರ್ತಿಕ್‌ರನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದರು.

ಹೈದರಾಬಾದ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯ
ಮೂರು ಪಂದ್ಯಗಳ ಟಿ20 ಸರಣಿ ಈಗ 1-1ರಿಂದ ಸಮಬಲವಾಗಿದ್ದು, ಸೆಪ್ಟೆಂಬರ್ 25ರಂದು ಭಾನುವಾರ ಹೈದರಾಬಾದ್‌ನಲ್ಲಿ ನಡೆಯುವ ಅಂತಿಮ ಟಿ20 ಪಂದ್ಯ ಸರಣಿಯನ್ನು ನಿರ್ಣಯಿಸಲಿದೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಸರಣಿ ಜಯದೊಂದಿಗೆ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಟೀಂ ಇಂಡಿಯಾಕ್ಕೆ ಇದು ಮುಖ್ಯವಾಗಿದೆ. ಇನ್ನು ಆಸ್ಟ್ರೇಲಿಯಾಗೆ ಕೂಡ ಈ ಪಂದ್ಯ ಮುಖ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications