ನವೆಂಬರ್ 23ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಹಲವು ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ, ಟಿ20 ತಂಡವು ತಾಜಾ ಮುಖಗಳನ್ನು ಹೊಂದಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡದ ನಾಯಕನಾಗಿದ್ದ, ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರು ನೂತನವಾಗಿ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ತಂಡದಿಂದ ಆತಿಥೇಯರು ಕೇವಲ ಮೂವರು ಆಟಗಾರರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಅವರೆಂದರೆ ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್.
ಆದಾಗ್ಯೂ, ಶ್ರೇಯಸ್ ಅಯ್ಯರ್ ಅವರು ರಾಯ್‌ಪುರ ಮತ್ತು ಬೆಂಗಳೂರಿನಲ್ಲಿ ಕೊನೆಯ ಎರಡು ಟಿ20 ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಮತ್ತು ಉಪನಾಯಕನ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.
ತಿರುವನಂತಪುರಂ ಎರಡನೇ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಗುವಾಹಟಿ ಮೂರನೇ ಟಿ20 ಪಂದ್ಯವನ್ನು ಆಯೋಜಿಸಲಿದೆ.

ಈ ವರ್ಷ ಹಲವು ಸರಣಿಗಳಲ್ಲಿ ಟಿ20 ಸರಣಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಲೀಗ್ ಹಂತದ ಪಂದ್ಯದ ವೇಳೆ ಪಾದದ ಗಾಯದಿಂದ ಹೊರಗುಳಿಯಲಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿಲ್ಲದಿರುವುದು ಗಮನಾರ್ಹ.
ಆಯ್ಕೆಯಾದ ಆಟಗಾರರಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಅವರಂತಹ ಪ್ರತಿಭೆಗಳ ಪ್ರದರ್ಶನವನ್ನು ನಿಕಟವಾಗಿ ವೀಕ್ಷಿಸಲಾಗುತ್ತದೆ. 2024 ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳು ಬಾಕಿ ಇರುವಾಗ, ಭಾರತವು ಹೊಸ ಮುಖಗಳಿಗೆ ಅವಕಾಶವನ್ನು ನೀಡಲು ಬಯಸುವ ಹಂತವನ್ನು ಪ್ರಾರಂಭಿಸಲಿದೆ.
ಬೌಲರ್‌ಗಳಲ್ಲಿ ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್ ಮತ್ತು ರವಿ ಬಿಷ್ಣೋಯ್ ಇದ್ದಾರೆ. ಇವರೆಲ್ಲರೂ ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಈ ಹಿಂದೆಯೂ ಭಾರತ ಪರ ಆಡಿದ್ದಾರೆ.
ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ತಂಡದಲ್ಲಿರುವ ಆಲ್ ರೌಂಡರ್‌ಗಳು. ಜಿತೇಶ್ ಶರ್ಮಾ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದಾರೆ. ಆಯ್ಕೆಯಾದ ಯುವ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಟಾರ್ ಪ್ರದರ್ಶನಕಾರರಾಗಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿಯು ಟಿ20 ಸ್ವರೂಪದಲ್ಲಿ ಕಿರಿಯರಿಗೆ ಹೆಚ್ಚಿನ ಅವಕಾಶವನ್ನು ನೀಡಲು ಒಲವು ತೋರಿಸುವುದರೊಂದಿಗೆ, ಆಯ್ಕೆಯಾದ ಆಟಗಾರರು ಮುಂದಿನ ವರ್ಷದ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ದೀರ್ಘಾವಧಿಯವರೆಗೆ ತಮ್ಮ ಸ್ಥಾನವನ್ನು ಕಬ್ಜ ಮಾಡಲು ಉತ್ಸುಕರಾಗಿರುತ್ತಾರೆ.
ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.