ಶುಕ್ರವಾರ, ಡಿಸೆಂಬರ್ 1ರಂದು ರಾಯ್‌ಪುರದಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 20 ರನ್‌ಗಳಿಂದ ಗೆಲುವು ಸಾಧಿಸಿತು ಮತ್ತು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.
ಈ ಮೂಲಕ ಟಿ20 ಕ್ರಿಕೆಟ್ ಸ್ವರೂಪದಲ್ಲಿ ಭಾರತ ಅತಿ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಂಡ ಎನಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಈ ಸಾಧನೆ ಮಾಡಿದೆ.

ನಾಲ್ಕನೇ ಪಂದ್ಯದಲ್ಲಿ ಭಾರತ ನೀಡಿದ್ದ 175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 154 ರನ್‌ಗಳಿಗೆ ನಿಯಂತ್ರಣಗೊಂಡಿತು. ಇದೀಗ ಟಿ20 ಸ್ವರೂಪದಲ್ಲಿ ಭಾರತ ತಮ್ಮ 136ನೇ ಗೆಲುವನ್ನು ದಾಖಲಿಸಿದೆ.
2006ರಲ್ಲಿ ಭಾರತ ತಂಡವು ಟಿ20 ಮಾದರಿಯಲ್ಲಿ ತನ್ನ ಚೊಚ್ಚಲ ಪಂದ್ಯ ಆಡಿದ ಬಳಿಕ, 213 ಟಿ20 ಪಂದ್ಯಗಳಲ್ಲಿ ಭಾರತವು 136 ಪಂದ್ಯಗಳನ್ನು ಗೆದ್ದಿದ್ದರೆ, 67 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ ಮತ್ತು ಮೂರು ಪಂದ್ಯಗಳು ಫಲಿತಾಂಶ ನೀಡಿಲ್ಲ. ಟಿ20 ಸ್ವರೂಪದಲ್ಲಿ ಭಾರತದ ಗೆಲುವಿನ ಶೇಕಡಾವಾರು 63.84 ಆಗಿದೆ.
ಭಾರತ 136 ಟಿ20 ಪಂದ್ಯಗಳ ಗೆಲುವಿನೊಂದಿಗೆ 226 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಗೆಲುವು ಸಾಧಿಸಿದ ಇತರ ಅಗ್ರ ತಂಡಗಳೆಂದರೆ, ನ್ಯೂಜಿಲೆಂಡ್ 200 ಪಂದ್ಯಗಳಲ್ಲಿ 102 ಗೆಲುವುಗಳು, ಆಸ್ಟ್ರೇಲಿಯಾ 181 ಪಂದ್ಯಗಳಲ್ಲಿ 95 ಗೆಲುವುಗಳು ಮತ್ತು ದಕ್ಷಿಣ ಆಫ್ರಿಕಾ 171 ಪಂದ್ಯಗಳಲ್ಲಿ 95 ಗೆಲುವುಗಳು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 37 ರನ್, ರುತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 32 ರನ್, ರಿಂಕು ಸಿಂಗ್ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 46 ರನ್ ಮತ್ತು ಜಿತೇಶ್ ಶರ್ಮಾ 19 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 35 ರನ್ ಬಾರಿಸಿದ್ದರಿಂದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 174 ರನ್ ಕಲೆಹಾಕಿತು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಪರ ಬೆನ್ ದ್ವಾರ್ಶುಯಿಸ್ ತಮ್ಮ ಎರಡನೇ ಟಿ20 ಪಂದ್ಯದಲ್ಲಿ 40 ರನ್ ನೀಡಿ 3 ವಿಕೆಟ್‌ಗಳೊಂದಿಗೆ ಮಿಂಚಿದರು. ತನ್ವೀರ್ ಸಂಘ 30 ರನ್ ನೀಡಿ 2 ವಿಕೆಟ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್ 32 ರನ್ ನೀಡಿ 2 ಕಬಳಿಸಿದರೆ, ಆರನ್ ಹಾರ್ಡಿ ಒಂದು ವಿಕೆಟ್ ಪಡೆದರು.
175 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ 16 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಸ್ಫೋಟಕ 31 ರನ್ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದರು. ಆದರೆ ಬೇಗನೆ ತಮ್ಮ ವಿಕೆಟ್ ಒಪ್ಪಿಸಿದರು.
ಮ್ಯಾಥ್ಯೂ ಶಾರ್ಟ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 22 ರನ್ ಮತ್ತು ನಾಯಕ ಮ್ಯಾಥ್ಯೂ ವೇಡ್ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 36 ರನ್ ಗಳಿಸಿ ಆಸೀಸ್ ತಂಡವನ್ನು ಪಂದ್ಯದ ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನ ಸಾಕಾಗಲಿಲ್ಲ ಮತ್ತು 20 ರನ್‌ಗಳ ಹಿಂದೆ ಬಿದ್ದರು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ 16 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ರವಿ ಬಿಷ್ಣೋಯ್ 17 ರನ್ ನೀಡಿ 1 ವಿಕೆಟ್ ಪಡೆದು ತಮ್ಮ ಸ್ಪಿನ್‌ನೊಂದಿಗೆ ಅದ್ಭುತವಾಗಿ ರನ್ ಹರಿವನ್ನು ನಿಯಂತ್ರಿಸಿದರು. ವೇಗಿ ದೀಪಕ್ ಚಹಾರ್ 44 ರನ್ ನೀಡಿ 2 ವಿಕೆಟ್ ಪಡೆದರೆ, ಅವೇಶ್ ಖಾನ್ ಒಂದು ವಿಕೆಟ್ ಪಡೆದರು.