IND vs AUS 3rd T20: ಸೂರ್ಯಕುಮಾರ್ ಯಾದವ್, ಕೊಹ್ಲಿ ಅರ್ಧಶತಕ, ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯಿಸಿದ ಟೀಂ ಇಂಡಿಯಾ
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ 187 ರನ್‌ಗಳ ಗುರಿಯನ್ನು ಸುಲಭವಾಗಿ ಮುಟ್ಟಿತು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ಮೊಹಾಲಿಯಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 1-1ರಲ್ಲಿ ಸರಣಿಯನ್ನು ಸಮಬಲಗೊಳಿಸಿಕೊಂಡಿತ್ತು.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು. ಆಸ್ಟ್ರೇಲಿಯಾ ಪರವಾಗಿ ಕ್ಯಾಮರೂನ್ ಗ್ರೀನ್ ಮತ್ತು ಟಿಮ್ ಡೇವಿಡ್ ಭರ್ಜರಿ ಅರ್ಧಶತಕ ಗಳಿಸಿದರು.
187 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೇವಲ ಒಂದು ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾ ಆರಂಭಿಕರನ್ನು ಔಟ್ ಮಾಡುವ ಮೂಲಕ ಮೇಲುಗೈ ಸಾಧಿಸಿತು.
ಆದರೆ ನಂತರ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 104 ರನ್‌ಗಳ ಜೊತೆಯಾಟ ಆಡುವ ಮೂಲಕ ಭಾರತದ ಆತಂಕವನ್ನು ದೂರ ಮಾಡಿದರು. ಇಬ್ಬರೂ ಅರ್ಧಶತಕ ಗಳಿಸಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 16 ರನ್‌ಗಳಲ್ಲಿ 25 ರನ್ ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.

33ನೇ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ
ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ನಂತರ ಬೌಂಡರಿ ಹೊಡೆಯಲು ಆರಂಭಿಸಿದರು. ಒಂದೆಡೆ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ರನ್ ಗಳಿಸುವಾಗ ಮತ್ತೊಂದು ಬದಿಯಲ್ಲಿ ಕೊಹ್ಲಿ ಇನ್ನಿಂಗ್ಸ್ ಆಂಕರ್ ಮಾಡಿದರು.
37 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 33ನೇ ಅರ್ಧಶತಕ ದಾಖಲಿಸಿದರು. 48 ಎಸೆತಗಳಲ್ಲಿ 4 ಬೌಂಡರಿ 4 ಭರ್ಜರಿ ಸಿಕ್ಸರ್ ರಹಿತ 63 ಗಳಿಸಿದ ವಿರಾಟ್ ಕೊಹ್ಲಿ ಅಂತಿಮ ಓವರ್ ನಲ್ಲಿ ಔಟಾದರು.
IND vs AUS 3ನೇ ಟಿ20: ಆಸೀಸ್ ಪರ ಜಂಟಿ 2ನೇ ವೇಗದ ಅರ್ಧಶತಕ ಬಾರಿಸಿದ ಕ್ಯಾಮರೂನ್ ಗ್ರೀನ್

ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್
ಆರಂಭಿಕರನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಆಸರೆಯಾದರು. ಒಂದೆಡೆ ವಿರಾಟ್ ಕೊಹ್ಲಿ ನಿಧಾನವಾಗಿ ರನ್ ಗಳಿಸುತ್ತಿದ್ದರೆ. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸುತ್ತಿದ್ದರು.
ಕೇವಲ 36 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 5 ಬೌಂಡರಿ, 5 ಭರ್ಜರಿ ಸಿಕ್ಸರ್ ಸಹಿತ 69 ರನ್ ಗಳಿಸಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದರು. ಇದು ಸೂರ್ಯಕುಮಾರ್ ಯಾದವ್ ಅವರ 7ನೇ ಅಂತಾರಾಷ್ಟ್ರೀಯ ಟಿ20 ಅರ್ಧಶತಕವಾಗಿದೆ.

ಆಸ್ಟ್ರೇಲಿಯಾಕ್ಕೆ ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಆಸರೆ
ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಸ್ಫೋಟಕ ಆರಂಭ ಪಡೆಯಿತು. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕ್ಯಾಮರೂನ್ ಗ್ರೀನ್, ಮೊದಲನೇ ಓವರ್ ನಿಂದಲೇ ಬೌಂಡರಿಗಳನ್ನು ಹೊಡೆಯಲು ಆರಂಭಿಸಿದರು. ನಾಯಕ ಫಿಂಚ್ 6 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.
19 ಎಸೆತಗಳಲ್ಲಿ 7 ಬೌಂಡರಿ ಮೂರು ಭರ್ಜರಿ ಸಿಕ್ಸರ್ ನೆರವಿನಿಂದ ಅರ್ಧಶತಕ ಗಳಿಸಿದ ಕ್ಯಾಮರೂನ್ ಗ್ರೀನ್ ಭಾರತದ ವಿರುದ್ಧ ಅತಿ ವೇಗದ ಅರ್ಧ ಶತಕ ಗಳಿಸಿದ ಆಟಗಾರ ಎನಿಸಿಕೊಂಡರು. ಅಂತಿಮ ಓವರ್ ಗಳಲ್ಲಿ ಸ್ಫೋಟಕ ಆಟವಾಡಿದ ಆಲ್‌ರೌಂಡರ್ ಟಿಮ್ ಡೇವಿಡ್ 27 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 54 ರನ್ ಗಳಿಸಿದರು.
ಭಾರತದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು. ಯುಜುವೇಂದ್ರ ಚಹಾಲ್ ಓವರ್ ಗಳಲ್ಲಿ 22 ರನ್ ನೀಡಿ 1 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 4 ಓವರ್ ಗಳಲ್ಲಿ 33 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಪಡೆದರು. ಜಸ್ಪ್ರೀತ್ ಬುಮ್ರಾ 4 ಓವರ್ ಗಳಲ್ಲಿ 50 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.

ಆಸ್ಟ್ರೇಲಿಯಾ ಮಧ್ಯಮ ಕ್ರಮಾಂಕ ಕುಸಿತ
ಕ್ಯಾಮರೂನ್ ಗ್ರೀನ್ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಬಿದ್ದಿತು. ನಂತರ ಬಂದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು. ಸ್ಟೀವ್ ಸ್ಮಿತ್ 9 ರನ್ ಗಳಿಸಿ ಔಟಾದರೆ, ಮ್ಯಾಕ್ಸ್‌ವೆಲ್ 6 ರನ್ ಗಳಿಸಿ ರನೌಟ್‌ಗೆ ಬಲಿಯಾದರು. ಜೋಶ್ ಇಂಗ್ಲಿಸ್ 24 ರನ್ ಗಳಿಸಿದರೆ, ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಮ್ಯಾಥ್ಯೂ ವೇಡ್ 1 ರನ್‌ಗೆ ಔಟಾದರು.
ಆದರೆ ಅಂತಿಮ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಡೇನಿಯಲ್ ಸ್ಯಾಮ್ಸ್ ಮತ್ತು ಟಿಮ್ ಡೇವಿಡ್ ಆಸ್ಟ್ರೇಲಿಯಾ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಸಹಾಯ ಮಾಡಿದರು.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಆರನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್ , ಡೇನಿಯಲ್ ಸ್ಯಾಮ್ಸ್, ಪ್ಯಾಟ್ ಕಮ್ಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಭಾರತ (ಪ್ಲೇಯಿಂಗ್ XI): ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications