Ind vs Aus T20: ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಮೂರು ಅದ್ಬುತ ಟಿ20 ಪಂದ್ಯಗಳಿವು
ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ತವರಿನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎದುರಿಸಲಿದೆ, ಮಂಗಳವಾರ, ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಎರಡೂ ತಂಡಗಳು ತೀವ್ರವಾದ ಅಭ್ಯಾಸ ನಡೆಸುವ ಮೂಲಕ ಪಂದ್ಯಕ್ಕಾಗಿ ಸಜ್ಜಾಗುತ್ತಿವೆ. ಸರಣಿಯ ಉಳಿದ ಎರಡು ಟಿ20 ಪಂದ್ಯಗಳು ಸೆಪ್ಟೆಂಬರ್ 23 ರಂದು ನಾಗ್ಪುರ ಮತ್ತು 25 ರಂದು ಹೈದರಾಬಾದ್‌ನಲ್ಲಿ ನಡೆಯಲಿವೆ.
ಮುಂಬರುವ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ನಂತರದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ಭಾರತಕ್ಕೆ ಮಹತ್ವದ್ದಾಗಿದೆ. ಏಷ್ಯಾಕಪ್‌ನಲ್ಲಿ ಭಾರತವು ಉತ್ತಮ ಪ್ರದರ್ಶಣ ನೀಡಿರಲಿಲ್ಲ, ಅಲ್ಲಿ ಸೂಪರ್ 4 ಹಂತದಲ್ಲಿ ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದ್ದಿತ್ತು. ಹಾಗಾಗಿ, ಭಾರತದ ಆಟಗಾರರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.
ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸಜ್ಜಾಗುತ್ತಿರುವಾಗ, ಎರಡು ತಂಡಗಳ ನಡುವಿನ ಮೂರು ಸ್ಮರಣೀಯ ಪಂದ್ಯಗಳು ಯಾವಾಗಲೂ ನೆನಪಾಗುತ್ತವೆ.

ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾಗೆ ಮುಖಭಂಗ
ಅಕ್ಟೋಬರ್ 10, 2013 ಭಾರತೀಯ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಿನ. ಸಚಿನ್ ತೆಂಡೂಲ್ಕರ್ ತಮ್ಮ 200 ನೇ ಟೆಸ್ಟ್ ನಂತರ ನಿವೃತ್ತಿಯಾಗುವುದಾಗಿ ಘೋಷಿಸಿದರು. ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿದ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು.
ರಾಜ್‌ಕೋಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಿತು. ಆರಂಭಿಕ ಆರೋನ್ ಫಿಂಚ್ (52 ಎಸೆತಗಳಲ್ಲಿ 89), ನಿಕ್ ಮ್ಯಾಡಿನ್ಸನ್ (16 ಎಸೆತಗಳಲ್ಲಿ 34) ಮತ್ತು ಮ್ಯಾಕ್ಸ್‌ವೆಲ್ (13 ಎಸೆತಗಳಲ್ಲಿ 27) ರನ್ ಹೊಡೆಯುವ ಮೂಲಕ ಆಸ್ಟ್ರೇಲಿಯಾ ಏಳು ವಿಕೆಟ್‌ಗೆ 201 ರನ್ ಗಳಿಸಿತು.
ಆರಂಭಿಕರಾದ ನಂತರ ಧವನ್ (19 ಎಸೆತಗಳಲ್ಲಿ 32) ಮತ್ತು ಕೊಹ್ಲಿ (22 ಎಸೆತಗಳಲ್ಲಿ 29) ಬೇಗನೆ ಔಟಾದರು. ಆದರೆ, ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದ ಯುವಿ ಆಸ್ಟ್ರೇಲಿಯಾ ವಿರುದ್ಧ 35 ಎಸೆತಗಳಲ್ಲಿ ಅಜೇಯ 77 ರನ್ ಗಳಿಸುವುದರೊಂದಿಗೆ ಭಾರತವನ್ನು ಗೆಲುವಿನ ದಡ ತಲುಪಿಸಿದರು.
16 ಓವರ್‌ಗಳಲ್ಲಿ ಭಾರತ ನಾಲ್ಕು ವಿಕೆಟ್‌ಗೆ 153 ರನ್ ಗಳಿಸಿತ್ತು. ಜೇಮ್ಸ್ ಫಾಕ್ನರ್ ಬೌಲಿಂಗ್‌ನಲ್ಲಿ ಸತತ ಸಿಕ್ಸರ್ ಬಾರಿಸಿದ ಯುವಿ ಭಾರತದ ಗೆಲುವನ್ನು ಸುಲಭವಾಗಿಸಿದರು. ಎಂಎಸ್ ಧೋನಿ ಕೊನೆಯ ಓವರ್‌ನಲ್ಲಿ ಶೇನ್ ವ್ಯಾಟ್ಸನ್ ಎಸೆತದಲ್ಲಿ ಬೌಂಡರಿ ಮತ್ತು 2 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಭಾರತವು ಆರು ವಿಕೆಟ್‌ಗಳೊಂದಿಗೆ 202 ರನ್‌ಗಳನ್ನು ಬೆನ್ನಟ್ಟಿತು.
Ind vs Aus 1st T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಂ, ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ 11

ಬ್ರಿಸ್ಬೇನ್‌ನಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ
ನವೆಂಬರ್ 2018 ರಲ್ಲಿ ಬ್ರಿಸ್ಬೇನ್‌ನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನು ನಾಲ್ಕು ರನ್‌ಗಳ ರೋಚಕ ಅಂತರದಲ್ಲಿ ಸೋಲಿಸಿತ್ತು. ಆಸ್ಟ್ರೇಲಿಯಾ 17 ಓವರ್‌ಗಳಲ್ಲಿ 4 ವಿಕೆಟ್‌ಗೆ 158 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತ್ತು. ಮಳೆಯಿಂದಾಗಿ ಓವರ್ ಕಡಿತಗೊಳಿಸಲಾಗಿದ್ದರಿಂದ ಭಾರತಕ್ಕೆ ಡಕ್‌ವರ್ಥ್ ಲೂಯಿಸ್ ನಿಯಮ ಪ್ರಕಾರ 17 ಓವರ್ ಗಳಲ್ಲಿ ಗೆಲುವಿಗಾಗಿ 174 ರನ್ ಗಳಿಸಬೇಕಿತ್ತು.
ಶಿಖರ್ ಧವನ್ 42 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 30 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಡುವ ಪ್ರಯತ್ನದಲ್ಲಿದ್ದರು. ಕೊನೆಯ ಓವರ್‌ನಲ್ಲಿ ಭಾರತಕ್ಕೆ 13 ರನ್ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಿದ ಸ್ಟೊಯಿನಿಸ್ ಎರಡು ಎಸೆತಗಳಲ್ಲಿ ಕೃನಾಲ್ ಪಾಂಡ್ಯ ಮತ್ತು ಕಾರ್ತಿಕ್ ಅವರನ್ನು ಔಟ್ ಮಾಡುವ ಮೂಲಕ 4 ರನ್‌ಗಳ ರೋಚಕ ಜಯಸಾಧಿಸಲು ಕಾರಣವಾದರು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ವಿಕೆಟ್ ಪಡೆದ ಆಡಮ್ ಜಂಪಾ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.

ಕ್ಯಾನ್‌ಬೆರಾದಲ್ಲಿ ನಡೆದ ರೋಚಕ ಪಂದ್ಯ
2020 ರ ಡಿಸೆಂಬರ್‌ನಲ್ಲಿ ಕ್ಯಾನ್‌ಬೆರಾದಲ್ಲಿ ಮೂರು ಪಂದ್ಯಗಳ ಸರಣಿಯ ಆರಂಭಿಕ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಕೆ.ಎಲ್ ರಾಹುಲ್ ಅರ್ಧಶತಕದ ನೆರವಿನಿಂದ 161 ರನ್ ಗಳಿಸಿತ್ತು.
ಈ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. 25ಕ್ಕೆ 3 ವಿಕೆಟ್ ಗಳಿಸಿದ ಯುಜುವೇಂದ್ರ ಚಹಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ, ಆದರೆ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡ ನಂತರ ಅವರ ಬದಲಿಯಾಗಿ ಕಣಕ್ಕಿಳಿದ ಚಹಾಲ್ ಬೌಲಿಂಗ್‌ನಲ್ಲಿ ಮಿಂಚಿದ್ದರು.
ಎಡಗೈ ವೇಗಿ ಟಿ ನಟರಾಜನ್ ಕೂಡ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಗ್ಲೆನ್ ಮ್ಯಾಕ್ಸ್‌ವೆಲ್ (2), ಡಿ'ಆರ್ಸಿ ಶಾರ್ಟ್ (34) ಮತ್ತು ಮಿಚೆಲ್ ಸ್ಟಾರ್ಕ್ (1) ಅವರನ್ನು ಔಟ್ ಮಾಡಿದರು.

ಆಸ್ಟ್ರೇಲಿಯಾ ವಿರುದ್ಧ 13 ಪಂದ್ಯ ಗೆದ್ದಿರುವ ಟೀಂ ಇಂಡಿಯಾ
ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ 23 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದೆ. ಟೀಂ ಇಂಡಿಯಾ ಹೆಡ್-ಟು-ಹೆಡ್ ರೇಸ್‌ನಲ್ಲಿ 13 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ. ತವರಿನಲ್ಲಿ ಭಾರತ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಸೋತಿದೆ.
ಮೂರು ಪಂದ್ಯಗಳ ಸರಣಿಯನ್ನು ಗೆಲ್ಲುವ ಮೂಲಕ ಅಂಕಿ ಅಂಶಗಳನ್ನು ಉತ್ತಮಪಡಿಸಿಕೊಳ್ಳಲು ಭಾರತ ತಂಡ ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತವರಿನಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಆತ್ಮವಿಶ್ವಾಸ ಪಡೆದುಕೊಳ್ಳಲು ಟಿ20 ಸರಣಿ ಗೆಲ್ಲಲು ಕಠಿಣ ಪರಿಶ್ರಮ ಹಾಕುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications