IND vs AUS 1st T20: ಸೂರ್ಯ, ಕಿಶನ್ ಸ್ಫೋಟಕ ಬ್ಯಾಟಿಂಗ್: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕೆ ರೋಚಕ ಗೆಲುವು!
ಗುರುವಾರ, ನವೆಂಬರ್ 23ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ 5 ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ಸಾಧಿಸಿತು.
ವಿಶಾಖಪಟ್ಟಣ ಸ್ಟೇಡಿಯಂನಲ್ಲಿ ನಡೆದ ದೊಡ್ಡ ಸ್ಕೋರ್‌ನ ಪಂದ್ಯದಲ್ಲಿ ಭಾರತ ತಂಡವು ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ, 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ಅವರ ಸ್ಫೋಟಕ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್‌ಗಳನ್ನು ಕಲೆಹಾಕಿತು.

209 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಉತ್ತಮ ಜೊತೆಯಾಟ ನೀಡಲಿಲ್ಲ. ಒಂದೂ ಎಸೆತ ಎದುರಿಸದೆ ರುತುರಾಜ್ ರನೌಟ್ ಆಗಿ ಹೊರನಡೆದರು. ಈ ವೇಳೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್ 8 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಂತರ ಜೊತೆಗೂಡಿದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಮೂರನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟದ ಮೂಲಕ ಕುಸಿದ ತಂಡವನ್ನು ಗೆಲುವಿನ ಹಳಿಗೆ ತಂದರು. ಈ ಜೊತೆಯಾಟ ತಂಡದ ಗೆಲುವಿಗೆ ಮುನ್ನುಡಿ ಬರೆದಿತ್ತು.

ತಂಡದ 134 ರನ್‌ಗಳಾಗಿದ್ದಾಗ ಇಶಾನ್ ಕಿಶನ್ 39 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 58 ರನ್ ಬಾರಿಸಿ ಔಟಾದರು. ಬಳಿಕ ಬಂದ ತಿಲಕ್ ವರ್ಮಾ 10 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಬೌಲರ್‌ಗಳ ವಿರುದ್ಧ ಸವಾರಿ ಮಾಡಿದರು. ತಮ್ಮ ಅದ್ಭುತ ಇನ್ನಿಂಗ್ಸ್‌ನಲ್ಲಿ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ 80 ರನ್ ಬಾರಿಸಿದರು.

ಆಗಲೇ ಆತಿಥೇಯ ತಂಡ ಗೆಲುವಿನ ಸಮೀಪದಲ್ಲಿದ್ದಾಗ ಕೊನೆಯಲ್ಲಿ ನಡೆದ ನಾಟಕೀಯ ತಿರುವಿನಲ್ಲಿ ಭಾರತ ಒಂದರ ಹಿಂದೆ ವಿಕೆಟ್ ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಮತ್ತೊಮ್ಮೆ ಆಸರೆಯಾದರು ಮತ್ತು ಕೊನೆಯ ಎಸೆತದಲ್ಲಿ ಒಂದು ರನ್ ಬೇಕಾಗಿದ್ದಾಗ ಗೆಲುವಿನ ಸಿಕ್ಸರ್ ಬಾರಿಸಿದರು.
ಆದರೆ, ಕೊನೆಯ ಎಸೆತ ನೋ ಬಾಲ್ ಆಗಿತ್ತು. ಹೀಗಾಗಿ ರಿಂಕು ಸಿಂಗ್ ಬಾರಿಸಿದ ಸಿಕ್ಸರ್ ಯಾವ ಲೆಕ್ಕಕ್ಕೂ ಇಲ್ಲದಂತಾಯಿತು. ಅಂತಿಮವಾಗಿ ರಿಂಕು ಸಿಂಗ್ 14 ಎಸೆತಗಳಲ್ಲಿ 4 ಬೌಂಡರಿ ಸಮೇತ 22 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ಪರ ತನ್ವೀರ್ ಸಂಘ 4 ಓವರ್‌ಗಳಲ್ಲಿ 47 ರನ್ ನೀಡಿ 2 ವಿಕೆಟ್ ಪಡೆದರೆ, ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಶಾರ್ಟ್, ಸೀನ್ ಅಬ್ಬೋಟ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಸ್ಟೀವನ್ ಸ್ಮಿತ್ ಮತ್ತು ಮ್ಯಾಥ್ಯೂ ಶಾರ್ಟ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 4.4 ಓವರ್‌ಗಳಲ್ಲಿ 31 ರನ್ ಗಳಿಸಿತು. ಈ ವೇಳೆ 11 ಎಸೆತಗಳಲ್ಲಿ 3 ಬೌಂಡರಿ ಸಮೇತ 13 ರನ್ ಗಳಿಸಿ ಆಡುತ್ತಿದ್ದ ಮ್ಯಾಥ್ಯೂ ಶಾರ್ಟ್ ಔಟ್ ಆದರು.
ನಂತರ ಬಂದ ಜೋಶ್ ಇಂಗ್ಲಿಸ್ ಆರಂಭಿಕ ಸ್ಟೀವನ್ ಸ್ಮಿತ್ ಜೊತೆಗೂಡಿ ಎರಡನೇ ವಿಕೆಟ್‌ಗೆ 130 ರನ್‌ಗಳ ಜೊತೆಯಾಟ ನಿರ್ಮಿಸಿದರು. 41 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 52 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್ ವಿಕೆಟ್ ಒಪ್ಪಿಸಿದರು.
ಇನ್ನು ಆಸ್ಟ್ರೇಲಿಯಾ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಜೋಶ್ ಇಂಗ್ಲಿಸ್ 50 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಾಯದಿಂದ 110 ರನ್‌ಗಳ ಶತಕ ಸಿಡಿಸಿದರು. ಉಳಿದಂತೆ ಮಾರ್ಕಸ್ ಸ್ಟೋಯಿನಿಸ್ 7 ರನ್ ಮತ್ತು ಟಿಮ್ ಡೇವಿಡ್ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಮೇತ 19 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಎಲ್ಲ ಬೌಲರ್‌ಗಳು ದುಬಾರಿಯಾದರು ಮತ್ತು ಕೇವಲ ಇಬ್ಬರು ತಲಾ ಒಂದೊಂದು ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 50 ರನ್ ನೀಡಿ 1 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ 54 ರನ್ ನೀಡಿ 1 ವಿಕೆಟ್ ಕಬಳಿಸಿದರು. ಉಳಿದ ಬೌಲರ್‌ಗಳು ವಿಕೆಟ್ ರಹಿತರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications