
ಭಾರತ ತಂಡದ ಮಾಜಿ ಕ್ರಿಕೆಟಿಗ, ಕರ್ನಾಟಕದವರೇ ಆದ ವೆಂಕಟೇಶ್ ಪ್ರಸಾದ್ ಮತ್ತೊಬ್ಬ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ವಿರುದ್ಧ ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ವೆಂಕಟೇಶ್ ಪ್ರಸಾದ್ ಟೀಕಿಸಿ ಸರಣಿ ಟ್ವೀಟ್ ಮಾಡಿದ್ದರು. ಕೆಎಲ್ ರಾಹುಲ್ ಮತ್ತು ಇತರೆ ಕೆಲವು ಆಟಗಾರರ ಟೆಸ್ಟ್ ದಾಖಲೆಗಳ ಸಮೇತ ಹೋಲಿಕೆ ಮಾಡುವ ಮೂಲಕ ಕೆಎಲ್ ರಾಹುಲ್‌ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಕೆಎಲ್ ರಾಹುಲ್‌ಗಿಂತ ಮಯಾಂಕ್ ಅಗರ್ವಾಲ್, ಶಿಖರ್ ಧವನ್ ಅವರ ದಾಖಲೆ ಉತ್ತಮವಾಗಿದೆ, ಅಜಿಂಕ್ಯ ರಹಾನೆ ಒಂದು ಸರಣಿಯಲ್ಲಿ ವಿಫಲವಾಗುತ್ತಿದ್ದಂತೆ ಅವರನ್ನು ತಂಡದಿಂದ ಕೈಬಿಡಲಾಯಿತು, ಆದರೆ ಕೆಎಲ್ ರಾಹುಲ್‌ಗೆ ಮಾತ್ರ ಪದೇ ಪದೇ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ವಿಫಲವಾದ ಬಳಿಕವೂ ಅವರಿಗೆ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿದ ತಂಡದಲ್ಲಿ ಅವಕಾಶ ನೀಡಲಾಗಿದೆ. ಇಂದೋರ್ ನ ಪಂದ್ಯದಲ್ಲಿ ಉತ್ತಮವಾಗಿ ರನ್ ಗಳಿಸುವ ಮೂಲಕ ಕೆಎಲ್ ರಾಹುಲ್ ನನ್ನನ್ನೂ ಸೇರಿದಂತೆ ಟೀಕೆ ಮಾಡುತ್ತಿರುವವರ ಬಾಯಿ ಮುಚ್ಚಿಸಲಿ ಇಲ್ಲವಾದಲ್ಲಿ ಕೌಂಟಿ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಫಾರ್ಮ್ ಕಂಡುಕೊಂಡು ಮತ್ತೆ ತಂಡದಲ್ಲಿ ಸ್ಥಾನ ಪಡೆಯಲಿ ಎಂದು ಹೇಳಿದ್ದರು.
ಆತ ವಿಶೇಷ ಬ್ಯಾಟರ್ ಎಂದ ದೊಡ್ಡ ಗಣೇಶ್
ವೆಂಕಟೇಶ್ ಪ್ರಸಾದ್ ಸರಣಿ ಟ್ವೀಟ್‌ಗೆ ಉತ್ತರ ನೀಡಿರುವ ಮತ್ತೊಬ್ಬ ಮಾಜಿ ಕರ್ನಾಟಕದ ಆಟಗಾರ ದೊಡ್ಡ ಗಣೇಶ್, ಕೆಎಲ್ ರಾಹುಲ್‌ಗೆ ಬೆಂಬಲ ನೀಡಿದ್ದಾರೆ. "ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಡಳಿತ ಮಂಡಳಿ ಕೆಎಲ್ ರಾಹುಲ್ ಸಾಮರ್ಥ್ಯದ ಬಗ್ಗೆ ಸಾಕಷ್ಟು ನಂಬಿಕೆ ಹೊಂದಿದ್ದಾರೆ, ಅದಕ್ಕಾಗಿಯೇ ಏಕದಿನ ಮಾದರಿಯಲ್ಲಿ ವೈಫಲ್ಯದ ನಡುವೆಯೂ ರೋಹಿತ್ ಶರ್ಮಾ ಸಾಕಷ್ಟು ಅವಕಾಶ ಪಡೆದುಕೊಂಡಂತೆ ಕೆಎಲ್ ರಾಹುಲ್‌ಗೆ ಅವಕಾಶ ನೀಡಲಾಗುತ್ತಿದೆ. ಕೆಎಲ್ ರಾಹುಲ್ ವಿಶೇಷ ಆಟಗಾರ ಎಂದು ನಮಗೆಲ್ಲಾ ತಿಳಿದಿದೆ. ಅವರ ಸಾಮರ್ಥ್ಯವನ್ನು ದೊಡ್ಡ ಮೊತ್ತದ ರನ್‌ಗಳಾಗಿ ಪರಿವರ್ತಿಸಲು ಇದು ಸೂಕ್ತ ಸಮಯವಾಗಿದೆ. ಮುಂದಿನ 2 ಟೆಸ್ಟ್ ಪಂದ್ಯಗಳಲ್ಲಿ ಅವರು ಉತ್ತಮ ರನ್ ಗಳಿಸುವ ವಿಶ್ವಾಸವಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಕಳಪೆ ಫಾರ್ಮ್‌ನಲ್ಲಿರುವ ರಾಹುಲ್
ಕೆಎಲ್ ರಾಹುಲ್ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಏಕದಿನ, ಟಿ20 ಮಾದರಿಯಲ್ಲಿ ವಿಫಲರಾಗಿದ್ದ ಅವರು ಟೆಸ್ಟ್‌ನಲ್ಲಿ ಮಿಂಚುವ ನಿರೀಕ್ಷೆ ಮಾಡಿತ್ತಾದರೂ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ವಿಫಲರಾದರು.
ಕಳಪೆ ಫಾರ್ಮ್ ನಡುವೆಯೂ ಅವರು ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಅವರನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಿದ್ದು, ಆಯ್ಕೆದಾರರು ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.