Akash Deep: ಆಕಾಶ್ ದೀಪ್ ಇದ್ದಕ್ಕಿದ್ದಂತೆ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿದ್ದೇಕೆ?
ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ವೇಗದ ಬೌಲರ್ ಆಕಾಶ್ ದೀಪ್ ಇದ್ದಕ್ಕಿದ್ದಂತೆ ಹೊರಗುಳಿದಿದ್ದಾರೆ.ಈ ಕುರಿತು ಮಾಹಿತಿಯನ್ನು ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಗುರುವಾರ ಬಹಿರಂಗಪಡಿಸಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಮಾತನಾಡಿದ್ದಾರೆ.
ಆಕಾಶ್ ದೀಪ್ ಬೆನ್ನು ಬಿಗಿತದ ಕಾರಣ ಶುಕ್ರವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ ಆಕಾಶ್ ದೀಪ್ ಒಟ್ಟು ಐದು ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಮಾಡುವಾಗ ಎರಡೂ ಪಂದ್ಯಗಳಲ್ಲಿ ಕ್ಯಾಚ್‌ಗಳನ್ನು ಮಿಸ್ ಮಾಡಿಕೊಂಡಿದ್ದು ದುರಾದೃಷ್ಟಕರ ಸಂಗತಿ.

ಗಂಭೀರ್ ಹೇಳಿದ್ದೇನು?
ಬೆನ್ನು ನೋವಿನ ಸಮಸ್ಯೆಯಿಂದ ಆಕಾಶ್ ದೀಪ್ ಸಿಡ್ನಿ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ. ಪಿಚ್ ನೋಡಿದ ನಂತರ ಪ್ಲೇಯಿಂಗ್ ಇಲೆವೆನ್ ನಿರ್ಧರಿಸಲಾಗುವುದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಆಕಾಶ್ ದೀಪ್ ಎರಡು ಟೆಸ್ಟ್‌ಗಳಲ್ಲಿ 87.5 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಅತಿಯಾದ ಕೆಲಸದ ಹೊರೆಯೂ ಅವರ ಗಾಯಕ್ಕೆ ಕಾರಣವಾಗಿರಬಹುದು ಎಂದು ವರದಿಗಳು ಹೇಳಿವೆ.
ಆಸ್ಟ್ರೇಲಿಯಾದ ಮೈದಾನಗಳಲ್ಲಿ ವೇಗದ ಬೌಲರ್‌ಗಳು ಮೊಣಕಾಲು, ಪಾದದ ಮತ್ತು ಬೆನ್ನಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಆಕಾಶದೀಪ್ ಬದಲಿಗೆ ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ ಆಡಬಹುದು. ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲು ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಬೇಕಾಗಿದೆ.
ಆಕಾಶ್ ದೀಪ್ ಬದಲಿಗೆ ಯಾರು?
ಭಾರತ ತಂಡದ ಪ್ಲೇಯಿಂಗ್-11ರಲ್ಲಿ ಆಕಾಶ್ ದೀಪ್ ಬದಲಿಗೆ ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ ಈ ಸ್ಥಾನಕ್ಕೆ ಎರಡು ಆಯ್ಕೆಗಳಾಗಿದ್ದಾರೆ. ಹರ್ಷಿತ್ ರಾಣಾ ಮೊದಲ 2 ಟೆಸ್ಟ್‌ಗಳಲ್ಲಿ ಪ್ಲೇಯಿಂಗ್-11 ರ ಭಾಗವಾಗಿದ್ದರು. ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 4 ವಿಕೆಟ್ ಪಡೆದಿದ್ದರು. ಮತ್ತೊಂದೆಡೆ ಒಂದು ವರ್ಷದ ಹಿಂದೆ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಇದುವರೆಗೆ ಕೇವಲ 2 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ರೋಹಿತ್ ಆಡ್ತಾರಾ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕೀಳಿಯುವ ಬಗ್ಗೆ ಇನ್ನೂ ಸಸ್ಪೆನ್ಸ್ ಇದೆ. ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಬದಲಿಗೆ ಗೌತಮ್ ಗಂಭೀರ್ ಭಾಗವಹಿಸಿ ಮಾತನಾಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಇದೀಗ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ಆಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಬಗ್ಗೆ ಮಾತನಾಡಿರುವ ಗಂಭೀರ್, ಅವರೊಂದಿಗೆ ಎಲ್ಲವೂ ಚೆನ್ನಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಭಾಗವಹಿಸದಿರುವುದನ್ನು ಚರ್ಚೆಯ ವಿಷಯ ಎಂದು ನಾನು ಭಾವಿಸುವುದಿಲ್ಲ. ನಾವು ನಾಳೆ ಪಿಚ್ ನೋಡಿ ನಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications