ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲು ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳು ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಟೀಮ್ ಇಂಡಿಯಾದ ಅನುಭವಿ ಆಟಗಾರ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದು ಒಂದು ಪದದಲ್ಲಿ ಕೊಹ್ಲಿಯನ್ನು ವರ್ಣಿಸಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
2021ರ ಆವೃತ್ತಿಯಲ್ಲಿಯೂ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿ ಬಳಿಕ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿದೆ ಟೀಮ್ ಇಂಡಿಯಾ. ಪ್ರಸ್ತುತ ಮತ್ತೆ ತನ್ನ ಅದ್ಭುತ ಲಯಕ್ಕೆ ಮರಳಿರು ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಭಾರತ ತಂಡದ ನಿರ್ಣಾಯಕ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯನ್ ತಂಡದ ಸದಸ್ಯರಾದ ಕ್ಯಾಮರೂನ್ ಗ್ರೀನ್, ಮಾರ್ನಸ್ ಲ್ಯಾಬುಶೈನ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಬಾರದಿರಲಿ ಎಂದು ಪ್ರಾರ್ಥಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ ಕ್ಯಾಮರೂನ್ ಗ್ರೀನ್, "ಭಾರತದ ಪ್ರಮುಖ ಕ್ರಿಕೆಟಿಗ, ಕಳೆದ ಒಂದು ದಶಕದಲ್ಲಿ ಭಾರತವನ್ನು ಮುಂದೆ ನಿಂತು ಯಶಸ್ವಿಯಾಗಿ ಮುನ್ನಡೆಸಿದ್ದಾರೆ" ಎಂದಿದ್ದಾರೆ ಕ್ಯಾಮರೂನ್ ಗ್ರೀನ್. ಇನ್ನು ಡೇವಿಡ್ ವಾರ್ನರ್ ಮಾತನಾಡಿ, ವಿರಾಟ್ ಕೊಹ್ಲಿಯ ಕವರ್‌ಡ್ರೈವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೊಹ್ಲಿಯ ಕವರ್‌ಡ್ರೈವ್ ನಂಬಸಾಧ್ಯ ಎಂದು ಬಣ್ಣಿಸಿದರು.
ಇನ್ನು ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಉಸ್ಮಾನ್ ಖವಾಜ ವಿರಾಟ್ ಕೊಹ್ಲಿಯನ್ನು 'ಸ್ಪರ್ಧಾತ್ಮಕ' ಆಟಗಾರ ಎಂದಿದ್ದಾರೆ. ಇನ್ನು ಮಿಚೆಲ್ ಸ್ಟಾರ್ಕ್ ಮಾತನಾಡಿದ್ದು ಭಾರತೀದ ಮಾಜಿ ನಾಯಕನನ್ನು ಅತ್ಯಂತ ಕೌಶಲ್ಯುತ ಆಟಗಾರ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಭಾರತದ ಮಧ್ಯಮ ಕ್ರಮಾಂಕದ ಆಧಾರಸ್ಥಂಭ ಎಂದಿದ್ದಾರೆ.
ಇನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಯಾವಾಗಲೂ ಹೋರಾಟಕ್ಕೆ ಸಿದ್ಧವಾಗಿರುವ ಅತ್ಯುತ್ತಮ ಆಟಗಾರ ಎಂದು ಹೊಗಳಿದ್ದಾರೆ. ಇನ್ನು ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ 'ಕ್ರಿಕೆಟ್‌ನ ಸೂಪರ್ ಸ್ಟಾರ್' ಎಂದು ವಿರಾಟ್ ಕೊಹ್ಲಿಯನ್ನು ಬಣ್ಣಿಸಿದ್ದಾರೆ.
"ಸುದೀರ್ಘ ಕಾಲದಿಂದ ಆತ ಕ್ರಿಕೆಟ್ ಸೂಪರ್ ಸ್ಟಾರ್ ಎನಿಸಿಕೊಂಡಿದ್ದು ಆಸ್ಟ್ರೇಲಿಯಾ ವಿರುದ್ಧ ಯಾವಾಗಲೂ ಆಡುವುದನ್ನು ಇಷ್ಟಪಡುತ್ತಾರೆ. ನಮ್ಮ ವಿರುದ್ಧ ಸಾಕಷ್ಟು ರನ್ ಕೂಡ ಅವರು ಬಾರಿಸಿದ್ದಾರೆ. ಈ ಬಾರಿ ಅವರನ್ನು ಹೆಚ್ಚು ಸದ್ದು ಮಾಡದಂತೆ ತಡೆಯಬಲ್ಲೆವು ಎಂಬ ನಿರೀಕ್ಷೆಯಲ್ಲಿದ್ದೇವೆ" ಎಂದಿದ್ದಾರೆ ಆಸಿಸ್ ಸ್ಟಾರ್ ಸ್ಟೀವ್ ಸ್ಮಿತ್.
34ರ ಹರೆಯದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ವಿರುದ್ಧ ಟೆಸ್ಟ್ ಮಾದರಿಯಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಆಸೀಸ್ ತಂಡದ ವಿರುದ್ದ ಅವರು 24 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 48.26ರ ಸರಾಸರಿಯಲ್ಲಿ 1979 ರನ್ ಗಳಿಸಿದ್ದಾರೆ. ಈ ಸುದೀರ್ಘ ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 8 ಶತಕಗಳನ್ನು ಗಳಿಸಿ ಇದೇ ವರ್ಷ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ 186 ರನ್ ಗಳಿಸುವ ಮೂಲಕ ಸುದೀರ್ಘ ಕಾಲದ ಬಳಿಕ ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿ ಮಿಂಚಿದ್ದರು.
ಇನ್ನು ವಿರಾಟ್ ಕೊಹ್ಇ ಇತ್ತೀಚೆಗೆ ಅಂತ್ಯವಾಗಿರುವ ಐಪಿಎಲ್‌ನಲ್ಲಿಯೂ ಅದ್ಭುತ ಲಯದಲ್ಲಿದ್ದು ಆ ಲಯದೊಂದಿಗೆ ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ 14 ಪಂದ್ಯಗಳನ್ನು ಆಡಿದ ಕೊಹ್ಲಿ ಸತತ ಎರಡು ಶತಕಗಳ ಸಹಿತ 639 ರನ್‌ಗಳನ್ನು ಗಳಿಸಿದರು. ಕೊಹ್ಲಿಯ ಈ ಫಾರ್ಮ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೂ ಮುನ್ನ ಆಸಿಸ್ ಆಟಗಾರರ ನಿದ್ದೆಗೆಡಿಸಿದೆ.