ನವೆಂಬರ್ 23ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಸೋಮವಾರ, ನವೆಂಬರ್ 20ರಂದು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 2023ರ ಏಕದಿನ ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು.
ವಿಶ್ವಕಪ್ ಪಂದ್ಯಾವಳಿಯ ಮುಕ್ತಾಯದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆಗಾರರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಅವರನ್ನು ಮತ್ತೊಮ್ಮೆ ಕೈಬಿಡಲಾಗಿದೆ.

ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಸ್ಪಿನ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಯುಜ್ವೇಂದ್ರ ಚಹಾಲ್ ತಮ್ಮ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗಿದೆ.
ಗಮನಾರ್ಹವಾಗಿ, 33 ವರ್ಷದ ಯುಜ್ವೇಂದ್ರ ಚಹಾಲ್ ಟಿ20 ಕ್ರಿಕೆಟ್ ಸ್ವರೂಪದಲ್ಲಿ ಭಾರತದ ಪರ ಅತಿ ಹೆಚ್ಚಿನ ವಿಕೆಟ್ ಟೇಕರ್ ಆಗಿದ್ದಾರೆ. ಆಡಿದ 80 ಟಿ20 ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಮ್ಯಾಚ್‌ವಿನ್ನರ್ ಎಂದು ಸಾಬೀತುಪಡಿಸಿದ್ದಾರೆ.
ಇತ್ತೀಚಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ಪರ ಯುಜ್ವೇಂದ್ರ ಚಹಾಲ್ ಉತ್ತಮ ಫಾರ್ಮ್‌ನಲ್ಲಿದ್ದರು. ತಂಡದ ಕೊನೆಯ ನಾಲ್ಕು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದರು. ಆದರೆ, ಏಷ್ಯನ್ ಗೇಮ್ಸ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಬೆಂಬಲಿಸಿದೆ.
ಇದೀಗ ಆಸ್ಟ್ರೇಲಿಯಾ ವಿರುದ್ಧದ ಟಿ20 ತಂಡದಿಂದ ಅವರನ್ನು ಹೊರಗಿಟ್ಟಿರುವುದು ಅನುಭವಿ ಲೆಗ್ ಸ್ಪಿನ್ನರ್‌ಗೆ ಚೆನ್ನಾಗಿ ಕಾಣಿಸಲಿಲ್ಲ. ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹೆಚ್ಚಿಗೆ ಏನೂ ಹೇಳದೆ, ಕೇವಲ ಒಂದು ನಗುವಿನ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದರು.
ಮತ್ತೊಂದೆಡೆ, ಆಸೀಸ್ ವಿರುದ್ಧದ ಟಿ20 ಸರಣಿಗಾಗಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಖಾಯಂ ನಾಯಕ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪೂರ್ಣ ಪ್ರಮಾಣದ ಸರಣಿಗೆ ಮುಂಚಿತವಾಗಿ ವಿಶ್ರಾಂತಿ ನೀಡಲಾಗಿದೆ.
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ತಂಡದಿಂದ ಭಾರತದ ಕೇವಲ ಮೂವರು ಆಟಗಾರರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅವರೆಂದರೆ ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್.

ಟಿ20 ತಂಡದಿಂದ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಆಲ್‌ರೌಂಡರ್ ಅವರು ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡ ಕಾರಣ, ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆತಿಥೇಯ ತಂಡದ ಭಾಗವಾಗಿಲ್ಲ.
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಅವರು ರಾಯ್‌ಪುರ ಮತ್ತು ಬೆಂಗಳೂರಿನಲ್ಲಿ ನಡೆಯುವ ಅಂತಿಮ ಎರಡು ಟಿ20 ಪಂದ್ಯಗಳಿಗೆ ಸೇರಿದ ನಂತರ ಉಪನಾಯಕರಾಗಿರುತ್ತಾರೆ.
ಇದೇ ವೇಳೆ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದ ಕಾರಣ, ವಿವಿಎಸ್ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುಖ್ಯ ಕೋಚ್ ಆಗಲಿದ್ದಾರೆ.