Ind vs Ban 3rd ODI : ಇಶಾನ್ ಕಿಶನ್ ದಾಖಲೆಯ ದ್ವಿಶತಕ, ಕೊಹ್ಲಿ 72ನೇ ಶತಕ, 409 ರನ್ ಕಲೆಹಾಕಿದ ಟೀಂ ಇಂಡಿಯಾ

ಛತ್ತೋಗ್ರಾಮ್ ಅಂಗಳದಲ್ಲಿ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಸರಣಿಯ ಕೊನೆಯ ಪಂದ್ಯದಲ್ಲಿ ನಿಗದಿನ 50 ಒವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 409 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಟೀಂ ಇಂಡಿಯಾ 6ನೇ ಬಾರಿಗೆ ಏಕದಿನ ಪಂದ್ಯದಲ್ಲಿ 400ಕ್ಕಿಂತ ಹೆಚ್ಚಿನ ರನ್ ಗಳಿಸಿದ ಸಾಧನೆ ಮಾಡಿದೆ.
ನಾಯಕ ರೋಹಿತ್ ಶರ್ಮಾ ಗಾಯಗೊಂಡು ಹೊರಗುಳಿದ ನಂತರ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದರೆ. 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದರು.
8 ಎಸೆತಗಳಲ್ಲಿ 3 ರನ್ ಗಳಿಸಿದ ಶಿಖರ್ ಧವನ್ ಮೆಹಿದಿ ಹಸನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಸರಣಿಯಲ್ಲಿ ಶಿಖರ್ ಧವನ್ ಸತತ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಮೂಡಿಸಿದರು.
ಶಿಖರ್ ಧವನ್ ಬೇಗನೆ ಔಟಾದ ನಂತರ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು. ಒಂದು ಕಡೆ ಅನುಭವಿ ವಿರಾಟ್ ಕೊಹ್ಲಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟುತ್ತಿದ್ದರೆ, ಮತ್ತೊಂದೆಡೆ ಯುವ ಕ್ರಿಕೆಟಿಗ ಇಶಾನ್ ಕಿಶನ್ ಸ್ಫೋಟಕವಾಗಿ ರನ್ ಗಳಿಸಿದರು. 3ನೇ ವಿಕೆಟ್‌ಗೆ ಈ ಜೋಡಿ ದಾಖಲೆಯ 290 ರನ್‌ಗಳ ಜೊತೆಯಾಟ ಆಡಿದರು.

ದಾಖಲೆಯ ದ್ವಿಶತಕ ಸಿಡಿಸಿದ ಇಶಾನ್ ಕಿಶನ್
ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಬಾಂಗ್ಲಾದೇಶ ಬೌಲರ್ ಗಳ ಬೆವರಿಳಿಸಿದರು. ಇಶಾನ್ ಕಿಶನ್ ತಾನೆಂತಹ ಆಟಗಾರ ಎನ್ನುವುದನ್ನು ಸಾಬೀತು ಮಾಡಿದರು. ಕೇವಲ 85 ಎಸೆತಗಳಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಶತಕವನ್ನು ಪೂರೈಸಿದ ಇಶಾನ್ ಕಿಶನ್ ನಂತರ ಅಬ್ಬರಿಸಿದರು. ಮೊದಲ 100 ರನ್ ಗಳಿಸಲು 85 ಎಸೆತ ತೆಗೆದುಕೊಂಡ ಇಶಾನ್ ಎರಡನೇ 100 ರನ್‌ಗಳನ್ನು ಪೂರೈಸಲು ತೆಗೆದುಕೊಂಡಿದ್ದು ಕೇವಲ 41 ಎಸೆತಗಳನ್ನು ಮಾತ್ರ.
126 ಎಸೆತಗಳಲ್ಲಿ 200 ರನ್‌ಗಳನ್ನು ಗಳಿಸುವ ಮೂಲಕ ವೇಗವಾಗಿ ದ್ವಿಶತಕ ಗಳಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಅವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಸೇರಿದೆ. 131 ಎಸೆತಗಳಲ್ಲಿ 210 ರನ್ ಗಳಿಸಿ ಅವರು ಔಟ್ ಆದರು. ಈ ಮೊದಲು ಕೆರಿಬಿಯನ್ ದೈತ್ಯ ಕ್ರಿಸ್‌ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದು, ಈವರೆಗಿನ ದಾಖಲೆಯಾಗಿತ್ತು.
72ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ರಿಕಿ ಪಾಂಟಿಂಗ್ ದಾಖಲೆ ಮೀರಿಸಿದ ವಿರಾಟ್
ಒಂದು ಕಡೆ ಇಶಾನ್ ಕಿಶಾನ್ ಬಾಂಗ್ಲಾದೇಶದ ಬೌಲರ್ ಗಳ ಬೆಂಡೆತ್ತಿದರೆ, ಅದಕ್ಕೆ ತಕ್ಕಂತೆ ಇನ್ನೊಂದು ಕಡೆಯಲ್ಲಿ ರನ್ ಗಳಿಸಿದ್ದು ವಿರಾಟ್ ಕೊಹ್ಲಿ. ಕಳೆದ ಎರಡು ಪಂದ್ಯಗಳಲ್ಲಿ ವಿಫಲವಾಗಿದ್ದ ಕೊಹ್ಲಿ ಮೂರನೇ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಿದರು. 85 ಎಸೆತಗಳಲ್ಲಿ 100 ರನ್‌ಗಳನ್ನು ಗಳಿಸುವ ಮೂಲಕ ತಮ್ಮ 72ನೇ ಶತಕವನ್ನು ಗಳಿಸಿ, ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದರು.
91 ಎಸೆತಗಳಲ್ಲಿ 11 ಬೌಂಡರಿ 2 ಭರ್ಜರಿ ಸಿಕ್ಸರ್ ನೆರವಿನಿಂದ 113 ರನ್ ಗಳಿಸಿ ಔಟಾದರು. ಈ ಶತಕದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಎರಡನೇ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. 100 ಶತಕ ಗಳಿಸಿರುವ ಸಚಿನ್ ತೆಂಡುಲ್ಕರ್ ಮೊದಲನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ 71 ಶತಕಗಳನ್ನು ಬಾರಿಸಿದ್ದು ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಇಶಾನ್ ಕಿಶನ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಕುಲ್ದೀಪ್ ಯಾದವ್,
ಬಾಂಗ್ಲಾದೇಶ : ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಯಾಸಿರ್ ಅಲಿ, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್, ತಸ್ಕಿನ್ ಅಹ್ಮದ್,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications