
ಗುರುವಾರ ಡಿಸೆಂಬರ್ 22ರಂದು ಮಿರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್‌ಗೆ ಬಾಂಗ್ಲಾದೇಶ ತಂಡಕ್ಕೆ ಎಡಗೈ ಸ್ಪಿನ್ನರ್ ನಸುಮ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ.
ನಾಯಕ ಹಾಗೂ ಅನುಭವಿ ಆಟಗಾರ ಶಕಿಬ್ ಅಲ್ ಹಸನ್ ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 12 ಓವರ್‌ಗಳನ್ನು ಬೌಲ್ ಮಾಡಿದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡಲು ಸಾಧ್ಯವಾಗಲಿಲ್ಲ.
ಶಕಿಬ್ ಭುಜದ ನೋವಿನಿಂದ ಬಳಲುತ್ತಿದ್ದು, ಹೀಗಾಗಿ ಬೌಲಿಂಗ್ ಮಾಡಿ ಭುಜದ ಮೇಲೆ ಮತ್ತಷ್ಟು ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಬಾಂಗ್ಲಾದೇಶ ತಂಡದ ಮುಖ್ಯ ಕೋಚ್ ರಸೆಲ್ ಡೊಮಿಂಗೊ ಹೇಳಿದರು.

ಯುವ ಆಟಗಾರ ನಸುಮ್ ಅಹ್ಮದ್ ನಾಲ್ಕು ಏಕದಿನ ಪಂದ್ಯಗಳು ಮತ್ತು 28 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ಇನ್ನೂ ಬಾಂಗ್ಲಾದೇಶ ತಂಡಕ್ಕಾಗಿ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಇದೇ ವೇಳೆ, ಬಾಂಗ್ಲಾದೇಶ ತಂಡವು ಅನಾಮುಲ್ ಹಕ್ ಬಿಜೋಯ್ ಅವರನ್ನು ಕೈಬಿಟ್ಟಿದ್ದು, ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಡದ ಮೊಮಿನುಲ್ ಹಕ್ ಅವರನ್ನು ಮತ್ತೆ ಉಳಿಸಿಕೊಂಡಿದೆ.
ತೊಡೆಸಂದು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಹಿರಿಯ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ಆತಿಥೇಯ ತಂಡ ಮತ್ತೊಬ್ಬ ವೇಗಿ ಎಬಾಡೋಟ್ ಹೊಸೈನ್ ಅವರನ್ನು ಕೈಬಿಡಲಾಗಿದ್ದು, ಅವರು ಚಟ್ಟೋಗ್ರಾಮ್‌ನ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ.
ಮೊಮಿನುಲ್ ಹಕ್ ಅವರ ಆಯ್ಕೆಯ ಕುರಿತು ಕೋಚ್ ರಸೆಲ್ ಡೊಮಿಂಗೊ ಪ್ರತಿಕ್ರಿಯಿಸಿ, ಮೊಮಿನುಲ್ ತುಂಬಾ ಉತ್ತಮ ಆಟಗಾರ ಹೀಗಾಗಿ ತಂಡದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದರು. ಆತಿಥೇಯ ತಂಡ ಮೊಮಿನುಲ್ ಅವರನ್ನು ಎರಡನೇ ಟೆಸ್ಟ್‌ಗೆ ಪರಿಗಣಿಸಲಿದೆ ಎಂದು ಕೋಚ್ ಹೇಳಿದ್ದಾರೆ.

"ಅವರು ತಮ್ಮ 11 ಶತಕಗಳಲ್ಲಿ 10 ಶತಕಗಳನ್ನು ಮಿರ್‌ಪುರದ ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಗಳಿಸಿದ್ದಾರೆ. ಕಳೆದ ವರ್ಷ ಅವರು ರನ್ ಗಳಿಸಲಿಲ್ಲ ಎಂದು ಒಪ್ಪಿಕೊಳ್ಳುವ ಮೊದಲಿಗರು. ಆದರೆ ಅವರು ತುಂಬಾ ಒಳ್ಳೆಯ ಆಟಗಾರನಾಗಿದ್ದಾರೆ. ಅವರನ್ನು ಖಂಡಿತವಾಗಿಯೂ ಎರಡನೇ ಟೆಸ್ಟ್‌ಗೆ ಪರಿಗಣಿಸಲಾಗುವುದು," ಎಂದು ಕೋಚ್ ರಸೆಲ್ ಡೊಮಿಂಗೊ ತಿಳಿಸಿದ್ದಾರೆ.
ಭಾರತ ವಿರುದ್ಧ 2ನೇ ಟೆಸ್ಟ್‌ಗೆ ಬಾಂಗ್ಲಾದೇಶ ತಂಡ
ಜಾಕಿರ್ ಹಸನ್, ನಜ್ಮುಲ್ ಹೊಸೈನ್, ಮೊಮಿನುಲ್ ಹಕ್, ಯಾಸಿರ್ ಅಲಿ, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಖಲೀದ್ ಅಹ್ಮದ್, ಮಹ್ಮುದುಲ್ ಹಸನ್, ರೆಜೌರ್ ರಹಮಾನ್ ರಾಜಾ