IND vs BAN: ಐಪಿಎಲ್ ಬಗ್ಗೆ ಯೋಚನೆ ನಿಲ್ಲಿಸಿ, ದೇಶದ ಬಗ್ಗೆ ಯೋಚಿಸಿ ಎಂದ ಪಾಕ್ ಕ್ರಿಕೆಟಿಗ

ಬುಧವಾರ, ಡಿಸೆಂಬರ್ 7ರಂದು ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ ವೀರೋಚಿತ ಹೋರಾಟದ ಹೊರತಾಗಿಯೂ ಪ್ರವಾಸಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧ 5 ರನ್‌ಗಳ ರೋಚಕ ಸೋಲು ಕಂಡಿತು.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಭಾರತ ತಂಡವನ್ನು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ತೀವ್ರವಾಗಿ ಟೀಕಿಸಿದ್ದಾರೆ ಮತ್ತು ಐಪಿಎಲ್‌ನತ್ತ ಯೋಚನೆ ಮಾಡದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವಂತೆ ಸಲಹೆ ನೀಡಿದ್ದಾರೆ.
ಭಾರತ ಫೇವರಿಟ್ ತಂಡವಾಗಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಆತಿಥೇಯ ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ ಅದ್ಭುತ ಬ್ಯಾಟಿಂಗ್ ಮತ್ತು ಬಾಂಗ್ಲಾದೇಶ ತಂಡದ ಬೌಲಿಂಗ್ ಪ್ರದರ್ಶನದಿಂದಾಗಿ ಸರಣಿ ತನ್ನದಾಗಿಸಿಕೊಂಡಿತು.

ವೈಟ್‌ವಾಶ್ ತಪ್ಪಿಸಲು ಎದುರು ನೋಡುತ್ತಿರುವ ಭಾರತ
ರೋಹಿತ್ ಶರ್ಮಾ, ಕುಲದೀಪ್ ಸೇನ್ ಮತ್ತು ದೀಪಕ್ ಚಹಾರ್ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿಯುವುದು ಖಚಿತವಾಗಿದ್ದು, ಈ ನಡುವೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಲ್ಲಿ ವೈಟ್‌ವಾಶ್ ತಪ್ಪಿಸಲು ಎದುರು ನೋಡುತ್ತಿದೆ. ಅಲ್ಲದೇ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆದ್ದು ತವರಿಗೆ ಹೆಮ್ಮೆಯಿಂದ ಮರಳಲು ಪ್ರಯತ್ನಿಸಲಿದೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮಾಜಿ ಪಾಕಿಸ್ತಾನ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ, ಭಾರತ ತಂಡದ ಆಟಗಾರರ ವಿರುದ್ಧ ವಾಗ್ದಾಳಿ ನಡೆಸಿದರು. ಆಟಗಾರರು ಐಪಿಎಲ್‌ನಲ್ಲಿನ ಶ್ರೀಮಂತಿಕೆಯ ಬದಲು ಅಂತಾರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಹೆಚ್ಚು ಯೋಚಿಸಬೇಕು ಎಂದು ಹೇಳಿದರು.

ಐಪಿಎಲ್ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ, ದೇಶದ ಬಗ್ಗೆ ಯೋಚಿಸಿ
"ಐಪಿಎಲ್ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಮತ್ತು ದೇಶದ ಬಗ್ಗೆ ಯೋಚಿಸಿ. ಭಾರತೀಯ ಕ್ರಿಕೆಟ್ ಅತ್ಯಂತ ಮುಖ್ಯವಾಗಿರಬೇಕು, ಫ್ರಾಂಚೈಸಿ ಕ್ರಿಕೆಟ್ ಅಲ್ಲ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹಣವಿದೆ, ಆದರೆ ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೂ ಹಣವನ್ನು ಗಳಿಸಬಹುದು. ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಲು ಪ್ರಾರಂಭಿಸದ ಹೊರತು, ಈ ರೀತಿಯ ಫಲಿತಾಂಶಗಳು ಮುಂದುವರಿಯುತ್ತವೆ," ಎಂದು ಡ್ಯಾನಿಶ್ ಕನೇರಿಯಾ ಅಭಿಪ್ರಾಯಪಟ್ಟರು.
ಭಾರತದ ಬ್ಯಾಟಿಂಗ್ ಕ್ರಮಾಂಕದ ನೀತಿಯನ್ನು ಟೀಕಿಸಿದರು ಮತ್ತು ಆಟಗಾರರು ಲೈನ್‌ಅಪ್‌ನಲ್ಲಿ ತಮ್ಮ ಸ್ಥಾನದ ಬಗ್ಗೆ ಗೊಂದಲದಲ್ಲಿದ್ದಾರೆ ಎಂದು ಹೇಳಿದ ಪಾಕಿಸ್ತಾನದ ಮಾಜಿ ಸ್ಪಿನ್ನರ್, ಭಾರತ ವಿರುದ್ಧ ಬಾಂಗ್ಲಾದೇಶ ಟೆಸ್ಟ್ ಸರಣಿಯನ್ನು ಗೆಲ್ಲಲು ಉತ್ತಮ ಅವಕಾಶವನ್ನು ಹೊಂದಿದೆ ಎಂದು ತಿಳಿಸಿದರು.

ವಿವಿಧ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡಿಸಲಾಗುತ್ತದೆ
"ಭಾರತದ ಬ್ಯಾಟರ್‌ಗಳು ತಮ್ಮ ಸ್ಥಾನದ ಬಗ್ಗೆ ಖಚಿತವಾಗಿಲ್ಲ. ಕಳೆದ ಕೆಲವು ತಿಂಗಳುಗಳಿಂದ ವಿವಿಧ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡಿಸಲಾಗುತ್ತದೆ. ಬೌಲಿಂಗ್ ದಾಳಿಯೂ ಬದಲಾಗುತ್ತಲೇ ಇದ್ದು, ಸರಿಯಾದ ಯೋಜನೆ ಅಥವಾ ತಯಾರಿ ನಡೆಸಿಲ್ಲ. ಭಾರತೀಯ ಕ್ರಿಕೆಟ್ ಸರಣಿಯಿಂದ ಸರಣಿಗೆ ಕುಸಿಯುತ್ತಿದೆ," ಎಂದು ಡ್ಯಾನಿಶ್ ಕನೇರಿಯಾ ಕಿಡಿಕಾರಿದರು.
ಬಾಂಗ್ಲಾದೇಶ ಅದ್ಭುತ ಗೆಲುವು ಸಾಧಿಸುವುದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿತು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಡಿಸೆಂಬರ್ 10ರಂದು ಚಟ್ಟೋಗ್ರಾಮ್‌ನಲ್ಲಿ ನಡೆಯಲಿದೆ. ಇನ್ನು ಭಾರತ ಮತ್ತು ಬಾಂಗ್ಲಾದೇಶ ನಡುವೆ ಡಿಸೆಂಬರ್ 14ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications