ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯ ಬುಧವಾರ ನವದೆಹಲಿಯಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಇತ್ತ ಬಾಂಗ್ಲಾದೇಶ ತಂಡ ಮೊದಲ ಸೋಲಿನ ಬಳಿಕ ಪುಟಿದೇಳುವ ವಿಶ್ವಾಸದಲ್ಲಿದೆ.
ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭಾರತ ಅದ್ಭುತ ಜಯ ಸಾಧಿಸಿತ್ತು. ಇದಕ್ಕೂ ಮುನ್ನ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 2-0 ಅಂತರದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸೋಲಿಸಿತ್ತು. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಬಗ್ಗು ಬಡಿಯಲು ತಯಾರಾಗಿದೆ. ಜೊತೆಗೆ ನಾಯಕ ಸೂರ್ಯಕುಮಾರ್ ಕೂಡ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಬಾಂಗ್ಲಾದೇಶ ವಿರುದ್ದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಬೃಹತ್ ದಾಖಲೆ ಸೃಷ್ಟಿಸುವ ಸನಿಹದಲ್ಲಿದ್ದಾರೆ. ಇದುವರೆಗೆ, ಅವರು ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಅವರಿಗೆ ಮಿಸ್ಟರ್ 360 ಡಿಗ್ರಿ ಎಂಬ ಹೆಸರು ಕೂಡ ಬಂದಿದೆ.
ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಕ್ರೀಸ್‌ಗೆ ಬಂದ ಕೂಡಲೇ ಬಿರುಸಿನ ಬ್ಯಾಟಿಂಗ್ ಆರಂಭಿಸಿದದ್ದರು. 14 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 29 ರನ್ ಬಾರಿಸಿದ್ದರು. ಈ ವೇಳೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಸೂರ್ಯ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗದೆ ವಿಕೆಟ್ ಕಳೆದುಕೊಂಡರು.
ನವದೆಹಲಿಯಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೂರ್ಯ 39 ರನ್ ಗಳಿಸಿದರೆ ದೊಡ್ಡ ಸಾಧನೆ ಮಾಡಲಿದ್ದಾರೆ. ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2500 ರನ್ ಪೂರೈಸಲಿದ್ದಾರೆ. ಇದಲ್ಲದೆ ಚುಟುಕು ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ 2500 ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಳ್ಳಲಿದ್ದು, ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಟೀಮ್ ಇಂಡಿಯಾ ಪರ ಕೊಹ್ಲಿ 73 ಪಂದ್ಯಗಳಲ್ಲಿ 2500 ರನ್ ಪೂರೈಸಿದ್ದು, ಈಗಾಗಲೇ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಭಾರತ ಪರ ಅತಿ ಕಡಿಮೆ ಪಂದ್ಯಗಳಲ್ಲಿ 2500 ರನ್ ಪೂರೈಸಿದ ಬ್ಯಾಟರ್ ಕೊಹ್ಲಿ. ಇತ್ತ ಸೂರ್ಯ ಇದುವರೆಗೆ 72 ಪಂದ್ಯಗಳನ್ನು ಆಡಿದ್ದಾರೆ.
ಅತಿ ಕಡಿಮೆ ಪಂದ್ಯಗಳಲ್ಲಿ 2500 ರನ್ ಪೂರೈಸಿದ ಬ್ಯಾಟರ್‌ಗಳ ಬಗ್ಗೆ ನೋಡುವುದಾದರೆ, ಪಾಕಿಸ್ತಾನದ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 67 ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಸೂರ್ಯ 72 ಟಿ20 ಪಂದ್ಯಗಳಲ್ಲಿ 2461 ರನ್ ಗಳಿಸಿದ್ದು, 2500 ಗಡಿ ಮುಟ್ಟಲು 39 ರನ್‌ಗಳ ಅವಶ್ಯಕತೆಯಿದೆ. ಸೂರ್ಯ 4 ಶತಕ ಮತ್ತು 20 ಅರ್ಧಶತಕ ಶತಕಗಳನ್ನು ಟಿ20 ಕ್ರಿಕೆಟ್‌ನಲ್ಲಿ ಹೊಂದಿದ್ದಾರೆ. ಒಂದು ವೇಳೆ ಸೂರ್ಯ 39 ರನ್ ಗಳನ್ನು ಹೊಡೆದರೆ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಎರಡನೇ ಟಿ20 ಪಂದ್ಯವನ್ನು ಭಾರತ ಗೆದ್ದರೆ, ಸೂರ್ಯಕುಮಾರ್ ವಿಶೇಷವಾದ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಅವರು ಭಾರತವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಗೆಲುವಿನ ಕಡೆ ಮುನ್ನಡೆಸಿದ ನಾಲ್ಕನೇ ನಾಯಕನಾಗಲಿದ್ದಾರೆ. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇದುವರೆಗೆ 11 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳಲ್ಲಿ ತಂಡ ಸೋಲು ಕಂಡಿದೆ. ಭಾರತ ರೋಹಿತ್ ನಾಯಕತ್ವದಲ್ಲಿ 50, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 42 ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 30 ಪಂದ್ಯಗಳನ್ನು ಭಾರತ ಗೆದ್ದಿದೆ. ಹಾರ್ದಿಕ್ ಪಾಂಡ್ಯ ನಾಯಕನ್ನಾಗಿ 10 ಪಂದ್ಯಗಳನ್ನು ಗೆಲ್ಲಿಸಿದ್ದಾರೆ.